ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಸ್ಟಂ ದೋಷ: ಸಂಚಾರ ಅಸ್ತವ್ಯಸ್ತ
PC: X.com
ಹೊಸದಿಲ್ಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ (ಇಂಡಿಗೊ)ಯ ಸಿಸ್ಟಂನಲ್ಲಿ ಶನಿವಾರ ಮಧ್ಯಾಹ್ನ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಸಾವಿರಾರು ಮಂದಿ ಪ್ರಯಾಣಿಕರು ಅತಂತ್ರವಾಗಿ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡರು. ಇದರ ಪರಿಣಾಮ ವಿಮಾನಗಳು ಹಲವು ಗಂಟೆ ಕಾಲ ವಿಳಂಬವಾಗಿ ಸಂಚರಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ದೊಡ್ಡ ದೊಡ್ಡ ಸರದಿ ಸಾಲು ಕಂಡುಬಂತು.
ಈ ತಾಂತ್ರಿಕ ದೋಷದಿಂದಾಗಿ ಮಧ್ಯಾಹ್ನ 12.30ರಿಂದ ದೇಶಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಆನ್ ಲೈನ್ ಬುಕ್ಕಿಂಗ್ ನಿಂದ ಹಿಡಿದು ಚೆಕ್ ಇನ್ ವರೆಗೆ ಸಮಸ್ಯೆ ಉಂಟಾಯಿತು. ಮಧ್ಯಾಹ್ನ 1.44ಕ್ಕೆ ತಾಂತ್ರಿಕ ದೋಷ ಉಂಟಾಗಿರುವುದನ್ನು ಕಂಪನಿ ಪ್ರಕಟಿಸಿದ್ದು, ಇಡೀ ಜಾಲದಾದ್ಯಂತ ತಾತ್ಕಾಲಿಕವಾಗಿ ಸಿಸ್ಟಂ ಸ್ಥಗಿತಗೊಂಡಿದೆ ಎಂದು ಹೇಳಿಕೆ ನೀಡಿದೆ.
ಸಂಜೆ 6.02ಕ್ಕೆ ಮತ್ತೊಂದು ಸಂದೇಶ ನೀಡಿ, ವಿಮಾನ ನಿಲ್ದಾಣ ಕಾರ್ಯಾಚರಣೆಯಲ್ಲಿ ನೆಟ್ ವರ್ಕ್ ಸಮಸ್ಯೆಯನ್ನು ಬಹುತೇಕ ಬಗೆಹರಿಸಲಾಗಿದ್ದು, ಇಡೀ ವ್ಯವಸ್ಥೆ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲ ಕಾಲ ಬೇಕಾಗಬಹುದು ಎಂದು ಸ್ಪಷ್ಟಪಡಿಸಿದೆ.
ಇಂಡಿಗೊ ಸಂಸ್ಥೆಯ ಸುಮಾರು 2000 ವಿಮಾನಗಳು ಸೇವೆಯಲ್ಲಿದ್ದು, ದೇಶೀಯ ವಿಮಾನಯಾನ ಸೇವೆಯಲ್ಲಿ ಸುಮಾರು ಶೇಕಡ 60ರಷ್ಟು ಪಾಲು ಹೊಂದಿದೆ. ವಿಮಾನ ಕಣ್ಗಾವಲು ವೆಬ್ ಸೈಟ್ ಫ್ಲೈಟ್ಅವೇರ್ ಪ್ರಕಾರ, ವಿಶ್ವಾದ್ಯಂತ 9900 ವಿಮಾನಗಳು ವಿಳಂಬವಾಗಿ ಸಂಚರಿಸಿದ್ದು, ಈ ಪೈಕಿ 889 ಇಂಡಿಗೊ ವಿಮಾನಗಳು ಸೇರಿದ್ದು, ಇದು ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ.
ಈ ತಾಂತ್ರಿಕ ದೋಷದಿಂದಾಗಿ ದೆಹಲಿ, ಬೆಂಗಳೂರು, ಮುಂಬೈ ಮತ್ತು ಚೆನ್ನೈ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣಗಳಲ್ಲಿ ದೊಡ್ಡ ಪ್ರಮಾಣದ ಸರದಿ ಸಾಲು ಕಂಡುಬಂತು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.