ಸಾವರ್ಕರ್ ಭಾರತದ ಗಣ್ಯ ಪುತ್ರ ಎಂದು ಇಂದಿರಾ ಗಾಂಧಿ ಗುಣಗಾನ ಮಾಡಿದ್ದರು: ರಾಹುಲ್ ಗಾಂಧಿಗೆ ಎನ್ಡಿಎ ತಿರುಗೇಟು
ರಾಹುಲ್ ಗಾಂಧಿ | ಶ್ರೀಕಾಂತ್ ಶಿಂಧೆ PC: x.com/TimesAlgebraIND
ಹೊಸದಿಲ್ಲಿ: ವಿ.ಡಿ.ಸಾವರ್ಕರ್ ಅವರನ್ನು ಲೋಕಸಭೆಯಲ್ಲಿ ಟೀಕಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿರುವ ಬಿಜೆಪಿ ಹಾಗೂ ಅದರ ಮಿತ್ರಪಕ್ಷವಾದ ಶಿವಸೇನೆ ಮುಖಂಡರು ಶನಿವಾರ ಲೋಕಸಭೆಯಲ್ಲಿ, "ನಿಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಹಿಂದುತ್ವ ಪ್ರತಿಪಾದಕ ಸಾವರ್ಕರ್ ಅವರನ್ನು ಭಾರತದ ಗಣ್ಯ ಪುತ್ರ ಎಂದು ಗುಣಗಾನ ಮಾಡಿ ಅವರ ಸ್ಮರಣೆಯಲ್ಲಿ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದ್ದರು" ಎಂದು ಕೆಣಕಿದರು.
ಸಾವರ್ಕರ್ ಅವರನ್ನು ಭಾರತದ ಗಮನಾರ್ಹ ಪುತ್ರ ಎಂದು ಬಣ್ಣಿಸಿದ ಇಂದಿರಾ ಗಾಂಧಿಯವರು ಕೂಡಾ ಸಂವಿಧಾನ ವಿರೋಧಿಯೇ ಎಂದು ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಪ್ರಶ್ನಿಸಿದರು. ಸಾವರ್ಕರ್ ಅವರ ಜನ್ಮ ಶತಮಾನೋತ್ಸವ ಸಮಾರಂಭದ ವೇಳೆ ʼಸ್ವತಂತ್ರವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕʼದ ಮುಖ್ಯಸ್ಥ ಪಂಡಿತ್ ಬಾಕಳೆ ಅವರಿಗೆ ಇಂದಿರಾ ಬರೆದಿದ್ದ ಪತ್ರವನ್ನು ಅವರು ಓದಿದರು.
"ನಿಮ್ಮ ಅಜ್ಜಿಯೂ ಸಂವಿಧಾನ ವಿರೋಧಿಯೇ? ಸಾವರ್ಕರ್ ವಿರುದ್ಧ ಬುದ್ಧಿಗೇಡಿತನದಿಂದ ಮಾತನಾಡುವುದು ನಿಮ್ಮ ಚಾಳಿ. ಆದರೆ ನಾವು ಸಾವರ್ಕರ್ ಅವರಿಗೆ ಕೃತಜ್ಞರು. ಅವರ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಶಿಂಧೆ ಹೇಳಿದರು.
ಇದಕ್ಕೆ ಉತ್ತರಿಸಲು ವಿರೋಧ ಪಕ್ಷದ ನಾಯಕ ಸಮಯಾವಕಾಶ ಕೇಳಿದಾಗ ಸಭಾಧ್ಯಕ್ಷರು ನಿರಾಕರಿಸಿದ್ದು, ಸದನದಲ್ಲಿ ಗದ್ದಲದ ವಾತಾವರಣಕ್ಕೆ ಕಾರಣವಾಯಿತು. ಶಿವಸೇನೆ (ಯುಬಿಟಿ) ಕೂಡಾ ಸಾವರ್ಕರ್ ಬಗೆಗಿನ ಕಾಂಗ್ರೆಸ್ ನಿಲುವನ್ನು ಒಪ್ಪಿಕೊಂಡಿದೆಯೇ ಎಂದು ಶಿಂಧೆ ಕೆಣಕಿದರು.
ಬಿಜೆಪಿಯ ನಿಶಿಕಾಂತ್ ದುಬೆ ಕೂಡಾ ರಾಹುಲ್ ಮೇಲೆ ವಾಗ್ದಾಳಿ ನಡೆಸಿ, ರಾಹುಲ್ ಎಂದೂ ಜೀವನವಿಡೀ ಸಾವರ್ಕರ್ ಆಗಲಾರರು. ವೀರ ಸಾವರ್ಕರ್ ಅವರ ಗೌರವಾರ್ಥ ಇಂದಿರಾಗಾಂಧಿ ಸ್ಮರಣೆಯ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಸಾವರ್ಕರ್ ಟ್ರಸ್ಟ್ ಗೆ 1979ರಲ್ಲಿ ಅವರು ವೈಯಕ್ತಿಕವಾಗಿ 11,000 ದೇಣಿಗೆ ನೀಡಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸಾವರ್ಕರ್ ಬಗ್ಗೆ ಸಾಕ್ಷ್ಯಚಿತ್ರವನ್ನೂ ಮಾಡಿಸಿದ್ದರು ಎಂದು ವಿವರಿಸಿದರು.