ಚಿತ್ರೀಕರಣ ವೇಳೆ ಗಾಯ; ಮಲಯಾಳಂ ನಟ ಪೃಥ್ವಿರಾಜ್ ಗೆ ಕೊಚ್ಚಿ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ
Photo: Social Media
ಕೊಚ್ಚಿ: ರವಿವಾರ ಕೇರಳದ ಇಡುಕ್ಕಿ ಮರಯೂರ್ ಎಂಬಲ್ಲಿ ಮಲಯಾಳಂ ಚಿತ್ರ “ವಿಲಾಯತ್ ಬುದ್ಧ” ಇದರ ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಪೃಥ್ವಿರಾಜ್ ಅವರಿಗೆ ಇಂದು ಶಸ್ತ್ರಕ್ರಿಯೆ ನಡೆಯಲಿದೆ.
ಚಿತ್ರೀಕರಣ ವೇಳೆ ಹಾರುವಾಗ ಕಾಲುಜಾರಿ ಬಿದ್ದ ಪೃಥ್ವಿರಾಜ್ ಅವರಿಗೆ ಕಾಲಿಗೆ ಗಾಯವಾಗಿದೆ. ಬಸ್ ತಂಗುದಾಣವೊಂದರಲ್ಲಿ ಫೈಟ್ ದೃಶ್ಯ ಚಿತ್ರೀಕರಣ ವೇಳೆ ಈ ಅವಘಡ ಸಂಭವಿಸಿದೆ. ನಟನ ಕಾಲಿನ ಲಿಗಮೆಂಟ್ಗೆ ಗಾಯವಾಗಿದ್ದು ಅವರನ್ನು ಇಡುಕ್ಕಿಯ ಹತ್ತಿರದ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿದ್ದರೂ ನಂತರ ಅಲ್ಲಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರಿಗೆ ಕೀಹೋಲ್ ಶಸ್ತ್ರಕ್ರಿಯೆ ನಡೆಯಲಿದೆ.
ಶಸ್ತ್ರಕ್ರಿಯೆ ನಂತರ ಅವರಿಗೆ ಎರಡು ಮೂರು ತಿಂಗಳು ವಿಶ್ರಾಂತಿ ಬೇಕಾಗಬಹುದೆಂದು ನಿರೀಕ್ಷಿಸಲಾಗಿದೆ.
ʻವಿಲಾಯತ್ ಬುದ್ಧʼ ಚಲನಚಿತ್ರವು ಜಯನ್ ನಂಬಿಯಾರ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಅವರು ಈ ಹಿಂದೆ ಪೃಥ್ವಿರಾಜ್ ಅಭಿನಯದ ಅಯ್ಯಪ್ಪನುಂ ಕೋಶಿಯುಂ ಎಂಬ ಭಾರೀ ಜನಪ್ರಿಯತೆ ಪಡೆದ ಚಲನಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ʻವಿಲಾಯತ್ ಬುದ್ಧʼ ಚಿತ್ರದಲ್ಲಿ ಪ್ರಥ್ವೀರಾಜ್ ಅವರು ʼಡಬಲ್ʼ ಮೋಹನನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಅನು ಮೋಹನ್ ಮತ್ತು ಪ್ರಿಯಂವದಾ ಕೃಷ್ಣನ್ ಕೂಡ ಇದ್ದಾರೆ.