ಮಣಿಪುರದಲ್ಲಿ ತೀವ್ರಗೊಂಡ ಪ್ರತಿಭಟನೆ: ಉದ್ರಿಕ್ತರಿಂದ ಸಿಎಂ ನಿವಾಸಕ್ಕೆ ನುಗ್ಗಲು ಯತ್ನ
ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ | ಉದ್ರಿಕ್ತ ಪ್ರತಿಭಟನಾಕಾರರು PC: X.com
ಗುವಾಹತಿ: ಜಿರಿಬಾಮ್ ನಲ್ಲಿ ಆರು ಮಂದಿ ಒತ್ತೆಯಾಳುಗಳನ್ನು ಹತ್ಯೆ ಮಾಡಿದ ಕ್ರಮವನ್ನು ಖಂಡಿಸಿ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಶನಿವಾರ ರಾತ್ರಿ ಉದ್ರಿಕ್ತ ಪ್ರತಿಭಟನಾಕಾರರು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ನಿವಾಸಕ್ಕೆ ನುಗ್ಗುವ ಪ್ರಯತ್ನ ಮಾಡಿದರು. ಈ ಹಂತದಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಏರ್ಪಟ್ಟಿತು. ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಬೇಕಾಯಿತು.
ಅಪಹೃತ ಆರು ಮಂದಿಯ ಶವ ಮಣಿಪುರ ನದಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದೆ. 10 ಮಂದಿ ಸಶಸ್ತ್ರ ಕುಕಿಗಳು ಭದ್ರತಾ ಪಡೆ ಸಿಬ್ಬಂದಿ ಜತೆಗಿನ ಗುಂಡಿನ ಕಾಳಗದಲ್ಲಿ ಮೃತಪಟ್ಟ ಬೆನ್ನಲ್ಲೇ ಒಂದೇ ಕುಟುಂಬದ ಆರು ಮಂದಿ ನಾಪತ್ತೆಯಾಗಿದ್ದರು. ಕಳೆದ ವಾರ 31 ವರ್ಷದ ಮಹಿಳೆಯನ್ನು ಜೀವಂತವಾಗಿ ದಹಿಸಲಾಗಿತ್ತು.
ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರು ಶನಿವಾರ ಶಾಸಕರನ್ನು ಭೇಟಿ ಮಾಡುವ ಸಲುವಾಗಿ ರಾಜ್ಯ ರಾಜಧಾನಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆಯಿಂದ ಪ್ರತಿಭಟನಾಕಾರರು ಮೂವರು ಸಚಿವರು ಮತ್ತು ಆರು ಮಂದಿ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.