ರಾಹುಲ್ ಗಾಂಧಿಯೊಂದಿಗೆ ಸಂವಹನ; ಪುಲ್ವಾಮ, ಅದಾನಿ ಕುರಿತು ಸತ್ಯಪಾಲ್ ಮಲಿಕ್ ಚರ್ಚೆ
Photo: twitter/RahulGandhi
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೊಂದಿಗೆ ಇತ್ತೀಚೆಗೆ ನಡೆಸಿದ ಸಂವಹನದ ವೀಡಿಯೊವನ್ನು ಬುಧವಾರ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೊದಲ್ಲಿ ಇಬ್ಬರು ನಾಯಕರು ಪುಲ್ವಾಮ ದಾಳಿ, ಜಮ್ಮು ಹಾಗೂ ಕಾಶ್ಮೀರದ ಪ್ರಸಕ್ತ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಅಕ್ಟೋಬರ್ 14ರಂದು ಈ ಮಾತುಕತೆ ನಡೆಸಿರುವುದಾಗಿ ರಾಹುಲ್ ಗಾಂಧಿ ಈ ವೀಡಿಯೊದಲ್ಲಿ ಹೇಳಿದ್ದಾರೆ.
‘ಎಕ್ಸ್’ನ ವೀಡಿಯೊಕ್ಕೆ ‘‘ಒಂದು ವೇಳೆ ನಮ್ಮಿಬ್ಬರ ಮಾತುಕತೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮಧ್ಯಪ್ರವೇಶಕ್ಕೆ ಕಾರಣವಾಗಲಿದೆಯೇ’’ ಎಂಬ ಶೀರ್ಷಿಕೆ ನೀಡಿದ್ದಾರೆ.
ಪುಲ್ವಾಮ, ರೈತರ ಪ್ರತಿಭಟನೆ ಹಾಗೂ ಅಗ್ನಿವೀರ್ನಂತಹ ಪ್ರಮುಖ ವಿಷಯಗಳ ಕುರಿತು ನಾನು ಹಾಗೂ ಸತ್ಯಪಾಲ್ ಮಲಿಕ್ ಚರ್ಚೆ ನಡೆಸಿದೆವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಲಿಕ್ ಅವರೊಂದಿಗೆ ಮಾತುಕತೆಯ ಆರಂಭದಲ್ಲಿ ರಾಹುಲ್ ಗಾಂಧಿ, ಅವರ ರಾಜಕೀಯ ಜೀವನದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲಿಕ್, ತಾನು 1973ರಲ್ಲಿ ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದೆ ಎಂದರು.
ರಾಹುಲ್ ಗಾಂಧಿ ಅವರು ಜಮ್ಮು ಹಾಗೂ ಕಾಶ್ಮೀರದ ಕುರಿತು ಅಭಿಪ್ರಾಯ ಕೇಳಿದಾಗ ಅವರು, ‘‘ಜಮ್ಮು ಹಾಗೂ ಕಾಶ್ಮೀರವನ್ನು ಸೇನಾ ಪಡೆಯಿಂದ ನಿರ್ವಹಿಸಲು ಸಾಧ್ಯವಿಲ್ಲ’’ ಎಂದರು.
ಈ ಸಮಯದಲ್ಲಿ ಅಗತ್ಯ ಇರುವುದು ಏನು? ಎಂದು ಪ್ರಶ್ನಿಸಿದಾಗ ‘‘ಜಮ್ಮು ಹಾಗೂ ಕಾಶ್ಮೀರದ ಜನರ ರಾಜ್ಯದ ಸ್ಥಾನಮಾನವನ್ನು ಕೂಡಲೇ ಹಿಂದಿರುಗಿಸಬೇಕು. ರಾಜ್ಯದ ಸ್ಥಾನಮಾನವನ್ನು ಕಸಿದುಕೊಂಡಿರುವುದು ಹಾಗೂ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಮಾಡಿರುವುದು ಅವರಿಗೆ ಸಂವಿಧಾನ 370ನೇ ವಿಧಿಯನ್ನು ರದ್ದುಪಡಿದಷ್ಟು ನೋವು ಉಂಟು ಮಾಡಿಲ್ಲ’’ ಎಂದರು.
ಜಮ್ಮು ಹಾಗೂ ಕಾಶ್ಮೀರದ ಭಯೋತ್ಪಾದನೆ ಬಗ್ಗೆ ಮಾತನಾಡಿದ ಮಲಿಕ್, ‘‘ಕಣಿವೆಯಲ್ಲಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳು ಎಲ್ಲಾ ಕಡೆ ನಡೆಯುತ್ತಿವೆ’’ ಎಂದರು.
ಪುಲ್ವಾಮ ದಾಳಿಯನ್ನು ಕೇಂದ್ರ ಸರಕಾರ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡಿತು ಎಂದು ಆರೋಪಿಸಿದ ಮಲಿಕ್, ಪುಲ್ವಾಮದ ಕುರಿತು ನೀಡಿದ ಮುನ್ನೆಚ್ಚರಿಕೆಯನ್ನು ಸರಕಾರ ನಿರ್ಲಕ್ಷಿಸಿತ್ತು ಎಂದರು.
ಅದಾನಿ ದೊಡ್ಡ ಗೋದಾಮನ್ನು ನಿರ್ಮಿಸಿದ್ದಾರೆ ಹಾಗೂ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸಿದ್ದಾರೆ. ಆದುದರಿಂದ ಭರವಸೆ ನೀಡಿದಂತೆ ಕನಿಷ್ಠ ಬೆಂಬಲ ಬೆಲೆ ನೀಡಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಮಲಿಕ್ ಹೇಳಿದರು.