FACT CHECK - ಕಾಂಗ್ರೆಸ್ ಚೀನಾದಿಂದ ಐಟಿ ಸೆಲ್ ವೆಬ್ ಸೈಟ್ ನಡೆಸುತ್ತಿದೆಯೆ? ವಾಸ್ತವ ಇಲ್ಲಿದೆ..
photo: boomlive.in
ಹೊಸದಿಲ್ಲಿ: ಚೀನಾದ ಸಿಚುನಾನ್ ನಿಂದ ನಡೆಸಲಾಗುತ್ತಿರುವ congressitcell.com ವೆಬ್ ಸೈಟ್ ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ನಡೆಸುತ್ತಿದೆ ಎಂಬ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿರುವ ಪೋಸ್ಟ್ ಒಂದರ ಪ್ರತಿಪಾದನೆಯು ಸುಳ್ಳು ಎಂದು boomlive.in ವರದಿ ಮಾಡಿದೆ.
ಈ ವೆಬ್ ಸೈಟ್ ಅನ್ನು 2017ರಲ್ಲಿ ಗುಜರಾತ್ ನ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸೃಷ್ಟಿಸಿದ್ದರಾದರೂ, ಈ ವೆಬ್ ಸೈಟ್ 2018ರಲ್ಲಿ ತನ್ನ ಕಾಲಾವಧಿ ಮೀರಿದ್ದು, ಇದಾದ ನಂತರ ಅದನ್ನು ನವೀಕರಿಸಲಾಗಿಲ್ಲ ಎಂದು ಹೇಳಲಾಗಿದೆ. ಈ ವೆಬ್ ತಾಣವನ್ನು ಅಪರಿಚಿತರು ಖರೀದಿಸಿದ್ದು, ಅವರ ಹೆಸರಿನ್ನೂ ಸಾರ್ವಜನಿಕವಾಗಿ ಬಹಿರಂಗಗೊಂಡಿಲ್ಲ. ವಾಸ್ತವವಾಗಿ ಈ ವೆಬ್ ತಾಣವು ಇತ್ತೀಚಿನವರೆಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಸುಳ್ಳು ಸಮೀಕ್ಷೆಯನ್ನು ಪ್ರಕಟಿಸುತ್ತಾ ಬರುತ್ತಿತ್ತು. ಯಾವುದೇ ವೆಬ್ ತಾಣದ ಹೆಸರುಗಳು ಶಾಶ್ವತವಾಗಿರುವುದಿಲ್ಲ ಹಾಗೂ ಅವನ್ನು ಕಾಲಕಾಲಕ್ಕೆ ನವೀಕರಿಸುತ್ತಲೇ ಇರಬೇಕಾಗುತ್ತದೆ. ಕೃಪೆಯ ಅವಧಿ ಮುಗಿದ ನಂತರ ಅಂತಹ ವೆಬ್ ತಾಣಗಳನ್ನು ಹರಾಜು ಹಾಕಲಾಗುತ್ತದೆ ಮತ್ತು ಈ ಹರಾಜಿನಲ್ಲಿ ಯಾರು ಬೇಕಾದರೂ ಇಂತಹ ವೆಬ್ ತಾಣಗಳನ್ನು ಖರೀದಿಸಬಹುದಾಗಿದೆ.
ಅಂತರ್ಜಾಲದ ಸರ್ಚ್ ಇಂಜಿನ್ ಹಿಂದಕ್ಕೆ ಚಲಾಯಿಸಿದಾಗ, congressitcell.com ವೆಬ್ ಸೈಟ್ ಮೊದಲ ಬಾರಿಗೆ 2018ರಲ್ಲಿ ಆರ್ಕೈವ್ ಆಗಿರುವುದು ಪತ್ತೆಯಾಗಿದೆ. ಹಾಗಂತ ವೆಬ್ ಸೈಟ್ ಸೃಷ್ಟಿಯಾದ ದಿನಾಂಕ ಅದೇ ಎಂದೂ ಅಲ್ಲ. ಬದಲಿಗೆ ಹುಡುಕಾಟದ ಯಂತ್ರವು ಆ ವೆಬ್ ಸೈಟ್ ನ ಚಿತ್ರವನ್ನು ಸೆರೆ ಹಿಡಿದಿರುವ ದಿನಾಂಕ ಮಾತ್ರ ಅದಾಗಿರುತ್ತದೆ.
Whoxy ಪ್ರಕಾರ, congressitcell.com ವೆಬ್ ಸೈಟ್ ಜೂನ್ 4, 2023ರಂದು Dropcatch.comನಲ್ಲಿ ನೋಂದಣಿಯಾಗಿದ್ದು, ಜೂನ್ 7, 2023ರಲ್ಲಿ ಪರಿಷ್ಕರಣೆಗೊಂಡಿದೆ. ಈ ವೆಬ್ ಸೈಟ್ ನ ಕಾಲಾವಧಿಯು ಜೂನ್ 4, 2024ರಂದು ಕೊನೆಯಾಗಲಿದೆ.
DropCatch ವೆಬ್ ಸೈಟ್ ಅನ್ನು ಪರಿಶೀಲಿಸಿದಾಗ, ಈ ವೆಬ್ ಸೈಟ್ ಬಳಕೆದಾರರಿಗೆ ಕಾಲಾವಧಿ ಮೀರುತ್ತಿರುವ ವೆಬ್ ಸೈಟ್ ಗಳನ್ನು ಖರೀದಿಸಲು ನೆರವು ಒದಗಿಸುವುದು ಕಂಡು ಬಂದಿದೆ. ಹೀಗೆಯೇ ಕಾಲಾವಧಿ ಮೀರಿದ್ದ congrerssitcell.com ಅನ್ನು ಈ ವೆಬ್ ಸೈಟ್ ಮೂಲಕವೇ ಖರೀದಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾರ್ಯಕರ್ತ, ನಾನು ಈ ವೆಬ್ ಸೈಟ್ ಅನ್ನು ನನ್ನ ಸ್ವಂತ ಆಸಕ್ತಿಯಿಂದ ಸೃಷ್ಟಿಸಿದ್ದೆನೇ ಹೊರತು ಪಕ್ಷವು ಇದರಲ್ಲಿ ಭಾಗಿಯಾಗಿರಲಿಲ್ಲ. ನಾನು ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ವಿಶ್ವಾಸ ಹೊಂದಿದ್ದೇನೆ ಹಾಗೂ ಕಾಂಗ್ರೆಸ್ ಪಕ್ಷವನ್ನು ಪ್ರಶಂಸಿಸಿ ನಾನು ಆ ವೆಬ್ ಸೈಟ್ ನಲ್ಲಿ ಕೆಲವು ಲೇಖನಗಳನ್ನು ಪ್ರಕಟಿಸಿದ್ದೇನೆ. ಆದರೆ, ನಾನು ಆ ವೆಬ್ ಸೈಟ್ ಅನ್ನು ನವೀಕರಿಸಲು ಮರೆತಿದ್ದರಿಂದ ಅದರ ಕಾಲಾವಧಿಯು 2018ರಲ್ಲಿ ಮೀರಿ ಹೋಯಿತು. ನನಗೆ ನನ್ನ ವೆಬ್ ಸೈಟ್ ಅವಧಿ ಮೀರಿ ಹೋಗಿದೆ ಎಂಬ ಇಮೇಲ್ ಅಧಿಸೂಚನೆ ಬಂದಿತಾದರೂ, ನನ್ನ ಬಳಿ ಹಣದ ಕೊರತೆ ಇದ್ದುದರಿಂದ ನಾನು ಆ ವೆಬ್ ಸೈಟ್ ಅನ್ನು ನವೀಕರಿಸಲು ಹೋಗಲಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಚೀನಾದ ಸಿಚುನಾನ್ ನಿಂದ ಕಾರ್ಯಾಚರಿಸುತ್ತಿರುವ congressitcell.com ವೆಬ್ ಸೈಟ್ ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಈ ಎಲ್ಲ ಪತ್ತೆ ಕಾರ್ಯಗಳಿಂದ ದೃಢಪಟ್ಟಿದೆ ಎಂದು boomlive.in ಸತ್ಯಶೋಧನಾ ವೇದಿಕೆ ಬಹಿರಂಗ ಪಡಿಸಿದೆ.