ವಿವೇಕಾನಂದ ಹಾಗೂ ಪರಮಹಂಸರ ಬಗ್ಗೆ ಅವಹೇಳನ: ಸ್ವಾಮೀಜಿಗೆ ಒಂದು ತಿಂಗಳ ನಿಷೇಧ ಹೇರಿದ ಇಸ್ಕಾನ್
ಹೊಸದಿಲ್ಲಿ: ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಅನುಚಿತವಾದ ಹೇಳಿಕೆ ನೀಡಿದ್ದಕ್ಕಾಗಿ ತನ್ನ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರನ್ನು ಇಸ್ಕಾನ್ ಒಂದು ತಿಂಗಳ ಕಾಲ ನಿಷೇಧಿಸಿದೆ. ಆಧ್ಯಾತ್ಮಿಕ ಭಾಷಣಕಾರರಾಗಿದ್ದು ಅಮೋಘ್ ಲೀಲಾ ದಾಸ್, ಅವರು ತಮ್ಮ ಇತ್ತೀಚಿನ ‘ಪ್ರವಚನ’ವೊಂದರಲ್ಲಿ ಸ್ವಾಮಿ ವಿವೇಕಾನಂದ ಹಾಗೂ ವಿವೇಕಾನಂದರ ಆಧ್ಯಾತ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರ ಬಗ್ಗೆ ಟೀಕಿಸಿದ್ದರು.
ಮೀನು ಸೇವನೆ ಕುರಿತಂತೆ ವಿವೇಕಾನಂದ ಹಾಗೂ ಪರಮಹಂಸರನ್ನು ಗುರಿ ಮಾಡಿದ್ದ ಲೀಲಾ ದಾಸ್, ಸದ್ಗುಣಶೀಲ ವ್ಯಕ್ತಿಯು ಪ್ರಾಣಿಗಳಿಗೆ ಹಾನಿ ಮಾಡುವ ಯಾವುದನ್ನೂ ಸೇವಿಸುವುದಿಲ್ಲ ಎಂದು ಹೇಳಿದ್ದರು.
“ಸದ್ಗುಣಿ ಎಂದಾದರೂ ಮೀನು ತಿನ್ನುತ್ತಾನಾ? ಮೀನು ಕೂಡ ನೋವನ್ನು ಅನುಭವಿಸುತ್ತದೆ, ಸರಿ? ಹಾಗಾದರೆ ಸದ್ಗುಣವಂತನು ಮೀನು ತಿನ್ನುವನೇ?” ಜನರನ್ನು ಉದ್ದೇಶಿಸಿ ಅಮೋಘ ಲೀಲಾ ದಾಸ್ ಪ್ರಶ್ನಿಸಿದ್ದರು. ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರನ್ನೂ ಕೂಡಾ ಲೀಲಾ ದಾಸ್ ಟೀಕಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಹುಟ್ಟುಹಾಕಿದ್ದು, ಇಸ್ಕಾನ್ ಅಮೋಘ ಲೀಲಾ ದಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿದೆ.
ಅಮೋಘ್ ಲೀಲಾ ದಾಸ್ ಅವರು, ಈ ಇಬ್ಬರು ವ್ಯಕ್ತಿಗಳ ಶ್ರೇಷ್ಠ ಬೋಧನೆಗಳ ಬಗ್ಗೆ ಅವರ ತಿಳುವಳಿಕೆಯ ಕೊರತೆಯಿಂದ "ಅನುಚಿತ ಮತ್ತು ಸ್ವೀಕಾರಾರ್ಹವಲ್ಲದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದರಿಂದ ನೋವಾಗಿದೆ. ಅವರನ್ನು ಒಂದು ತಿಂಗಳ ಅವಧಿಗೆ ಇಸ್ಕಾನ್‌ನಿಂದ ನಿಷೇಧಿಸಲಾಗುವುದು" ಎಂದು ಇಸ್ಕಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಅಮೋಘ ಲೀಲಾ ದಾಸ್ ಅವರು ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ಗೋವರ್ಧನ ಬೆಟ್ಟಗಳಲ್ಲಿ ಒಂದು ತಿಂಗಳ ಕಾಲ ಪ್ರಾಯಶ್ಚಿತ್ತ ಮಾಡಲು ಪ್ರತಿಜ್ಞೆ ಮಾಡಿದ್ದಾರೆ ಎಂದು ಇಸ್ಕಾನ್ ತಿಳಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ಲೀಲಾದಾಸ್ ಅವರು ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ಹೊರಗುಳಿಯಬೇಕು ಎಂದು ಇಸ್ಕಾನ್ ಹೇಳಿದೆ.