ಜಲಗಾಂವ್ ರೈಲು ದುರಂತ: ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವದಂತಿ ಹಬ್ಬಿದ್ದು ಟೀ ಮಾರಾಟಗಾರ!

Photo | indiatoday.in
ಮಹಾರಾಷ್ಟ್ರ : ಜಲಗಾಂವ್ ನಲ್ಲಿ ಬುಧವಾರ ರೈಲು ಹರಿದು 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ಘಟನೆ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರತ್ಯಕ್ಷದರ್ಶಿಯೋರ್ವರು ಹೇಳಿಕೆಯೊಂದನ್ನು ನೀಡಿದ್ದು, ಟೀ ಮಾರಾಟಗಾರನೋರ್ವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವದಂತಿಯನ್ನು ಹಬ್ಬಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೋರ್ವ ಮಾಹಿತಿಯನ್ನು ನೀಡಿದ್ದು, ಟೀ ಮಾರಾಟಗಾರನೋರ್ವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವದಂತಿಯನ್ನು ಹಬ್ಬಿದ್ದಾನೆ, ಇದಲ್ಲದೆ ರೈಲಿನ ಸರಪಳಿಯನ್ನು ಎಳೆದಿದ್ದಾನೆ. ಇದರಿಂದ ಪ್ರಯಾಣಿಕರು ಪ್ರಾಣ ರಕ್ಷಿಸಲು ರೈಲಿನಿಂದ ಜಿಗಿದಿದ್ದಾರೆ. ಕೆಲವರು ಬೆಂಗಳೂರು ಎಕ್ಸ್ ಪ್ರೆಸ್ ಹಾದು ಹೋಗುತ್ತಿದ್ದ ಟ್ರ್ಯಾಕ್ ಗೆ ನೇರವಾಗಿ ಹಾರಿದ್ದು, ಈ ವೇಳೆ ಬಂದ ರೈಲಿನಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಅಧಿಕ ಮಂದಿ ಮತ್ತೊಂದು ಕಡೆಯಿಂದ ರೈಲಿನಿಂದ ಜಿಗಿದಿದ್ದಾರೆ. ಅಲ್ಲಿ ಯಾವುದೇ ಹಳಿಗಳು ಇರಲಿಲ್ಲ, ಒಂದು ವೇಳೆ ಅಲ್ಲಿ ಕೂಡ ಹಳಿ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿರುತ್ತಿತ್ತು ಎಂದು ಹೇಳಿದ್ದಾರೆ.
ʼ12533ʼ ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯ ಬಳಿಕ ಪ್ರಯಾಣಿಕರು ರೈಲಿನಿಂದ ಇಳಿದು ಹಳಿಯ ಮೇಲೆ ನಿಂತುಕೊಂಡಿದ್ದರು. ಈ ವೇಳೆ ಬಂದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದು ಸಾವು- ನೋವಿಗೆ ಕಾರಣವಾಗಿದೆ.
ಕೋಚ್ ಒಳಗೆ ಬೆಂಕಿ ಕಾಣಿಸಿಕೊಂಡಿಲ್ಲ : ರೈಲ್ವೇ ಮಂಡಳಿ ಸ್ಪಷ್ಟನೆ
ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಪಚೋರಾ ಬಳಿಯ ಮಾಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ರೈಲ್ವೇ ಮಂಡಳಿಯ ಮಾಹಿತಿ ಮತ್ತು ಪ್ರಚಾರ ವಿಭಾಗದ ನಿರ್ದೇಶಕ ದಿಲೀಪ್ ಕುಮಾರ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯನ್ನು ತಳ್ಳಿ ಹಾಕಿದ್ದಾರೆ. ನಾವು ಸ್ವೀಕರಿಸಿದ ಮಾಹಿತಿಯಂತೆ ರೈಲಿನ ಯಾವುದೇ ಕೋಚ್ ಒಳಗೆ ಬೆಂಕಿ ಅಥವಾ ಕಿಡಿ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದು, ಈ ಪೈಕಿ ಎಂಟು ಮಂದಿಯನ್ನು ಅವರ ಆಧಾರ್ ಕಾರ್ಡ್ ಗಳ ಮೂಲಕ ಗುರುತಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಐಜಿಪಿ ದತ್ತಾತ್ರಯ ಕರಾಳೆ ಖಚಿತಪಡಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಣೆ
ಜಲಗಾಂವ್ ರೈಲು ಅಪಘಾತದಲ್ಲಿ ಮೃತರ ಕುಟುಂಬಕ್ಕೆ ರೈಲ್ವೆ ಸಚಿವಾಲಯ ತಲಾ 1.5 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 5,000 ರೂ.ಗಳ ಪರಿಹಾರವನ್ನು ಘೋಷಿಸಿದೆ.