ಜಮ್ಮು ಮತ್ತು ಕಾಶ್ಮೀರ | ಸೇನೆಯ ಮೇಜರ್ ಆಗಿದ್ದ ತಮ್ಮ ತಂದೆ ಹುತಾತ್ಮರಾದ 20 ವರ್ಷಗಳ ನಂತರ ಸೇನೆಗೆ ಸೇರ್ಪಡೆಯಾಗಲಿರುವ ಅವರ ಪುತ್ರಿ
Photo: timesofindia.indiatimes.com
ಚಂಡಿಗಡ: ಇನಾಯತ್ ವತ್ಸ್ ಹೆಸರಿನ ಮೊದಲ ಪದದ ಅರ್ಥ ದಯೆ ಎಂದಿದ್ದರೂ, ಆಕೆ ತಾನು ಕೇವಲ ಮೂರು ವರ್ಷದವಳಾಗಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಆದರೆ, ಈ ಘಟನೆ 23 ವರ್ಷದ, ಪದವೀಧರೆಯಾದ ಇನಾಯತ್ ವತ್ಸ್ ರ ಎದೆಗುಂದಿಸಲಿಲ್ಲ. ಬದಲಿಗೆ, ಆಕೆಯೀಗ ಸೇನೆಯಲ್ಲಿ ಆಲಿವ್ ಹಸಿರು ಎಲೆಯ ಸಮವಸ್ತ್ರವನ್ನು ಧರಿಸುವ ಮೂಲಕ ತನ್ನ ತಂದೆಯ ಪರಂಪರೆಯನ್ನು ಮುಂದುವರಿಸಲು ಮುಂದಾಗಿದ್ದಾಳೆ. 2003ರಲ್ಲಿ ಕಾಶ್ಮೀರಲ್ಲಿ ನಡೆದಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೇಜರ್ ನವನೀತ್ ವತ್ಸ್ ಹುತಾತ್ಮರಾಗಿದ್ದರು.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತನ್ನ ಕುಟುಂಬದ ಮೂರನೆಯ ತಲೆಮಾರಿನ ವ್ಯಕ್ತಿ ಇನಾಯತ್ ವತ್ಸ್ ಆಗಿದ್ದಾರೆ. ಆಕೆಯ ತಾಯಿಯ ತಂದೆ ಕೂಡಾ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು.
ಕಾಶ್ಮೀರದ ಕಟ್ಟಡವೊಂದರ ಒಳಗೆ ನುಸುಳಿದ್ದ ಭಯೋತ್ಪಾದಕರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನವನೀತ್ ವತ್ಸ್ ಅವರು ಭಯೋತ್ಪಾದಕರ ಗುಂಡಿಗೆ ಬಲಿಯಾದಾಗ ಇನಾಯತ್ ವತ್ಸ್ ಕೇವಲ 2.5 ವರ್ಷದ ಮಗುವಾಗಿದ್ದರು. ನವನೀತ್ ಗೆ ಮರಣೋತ್ತರ ಸೇನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಎಪ್ರಿಲ್ ತಿಂಗಳಲ್ಲಿ ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿ (ಒಟಿಎ) ಗೆ ಇನಾಯತ್ ಸೇರ್ಪಡೆಯಾಗಲಿದ್ದಾರೆ. ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವೀಧರೆಯಾಗಿರುವ ಇನಾಯತ್, ಸದ್ಯ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಹರ್ಯಾಣ ಸರಕಾರವು ಹುತಾತ್ಮ ಯೋಧರ ಮಕ್ಕಳಿಗೆ ಕೊಡಮಾಡುವ ನೇಮಕಾತಿಯ ಆಮಂತ್ರಣವನ್ನು ನೀಡಿತ್ತು.
ಆದರೆ, ತನ್ನ ತಂದೆಯನ್ನೇ ತನ್ನ ಆದರ್ಶ ಮಾದರಿಯಾಗಿಸಿಕೊಂಡಿದ್ದ ಇನಾಯತ್ ವತ್ಸ್ ಮಾತ್ರ ತಮ್ಮ ಗುರಿಯೆಡೆಗೆ ಮುನ್ನಡೆದಿದ್ದರು. ತಮ್ಮ ಆತಂಕದ ಹೊರತಾಗಿಯೂ ಇನಾಯತ್ ತಾಯಿ ಶಿವಾನಿ ಆಕೆಯ ಬೆನ್ನಿಗೆ ನಿಂತಿದ್ದರು. ಇದೀಗ ತನ್ನ ಗುರಿಯನ್ನು ಪೂರೈಸಿಕೊಳ್ಳುವತ್ತ ಇನಾಯತ್ ವತ್ಸ್ ಮೊದಲ ಅಡಿ ಇಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇನಾಯತ್ ತಾಯಿ ಶಿವಾನಿ, “ಆಕೆ ಧೀರ ಗುಂಡಿಗೆಯ ಯೋಧನ ಪುತ್ರಿ. ಆಕೆ ತನ್ನ ಪದವಿಯನ್ನು ಪೂರೈಸಿದಾಗ, ಬಹುತೇಕರು ರಾಜ್ಯ ಸರಕಾರ ನೀಡಿದ್ದ ಉದ್ಯೋಗ ಆಮಂತ್ರಣವನ್ನು ಒಪ್ಪಿಕೊಳ್ಳುತ್ತಾಳೆ ಎಂದು ಭಾವಿಸಿದ್ದರು. ಆದರೆ, ಆಕೆ ಹುತಾತ್ಮ ಯೋಧನ ಪುತ್ರಿಯಾಗಿದ್ದು, ಆಕೆ ಸೇನೆಗೆ ಸೇರ್ಪಡೆಯಾಗುತ್ತಿರುವುದು ಸಹಜವೇ ಆಗಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.