ಜಮ್ಮು-ಕಾಶ್ಮೀರ | ಎಲ್ಲಾ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ : ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಘೋಷಣೆ
PC : PTI
ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎಲ್ಲಾ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವ ಅಂತಿಮಗೊಂಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅಬ್ದುಲ್ಲಾರನ್ನು ಶ್ರೀನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಈ ಘೋಷಣೆ ಹೊರಬಿದ್ದಿದೆ.
‘‘ನಾವು ಆತ್ಮೀಯ ವಾತಾವರಣದಲ್ಲಿ ಒಳ್ಳೆಯ ಸಭೆ ನಡೆಸಿದ್ದೇವೆ. ದೇವರ ದಯೆಯಿಂದ ಮೈತ್ರಿಕೂಟಕ್ಕೆ ವೇದಿಕೆ ಸಿದ್ಧವಾಗಿದೆ ಮತ್ತು ಅದು ಸುಗಮವಾಗಿ ಸಾಗುತ್ತದೆ. ಈಗ ಮೈತ್ರಿ ಅಂತಿಮಗೊಂಡಿದೆ. ಎಲ್ಲಾ 90 ಕ್ಷೇತ್ರಗಳಲ್ಲಿ ಮೈತ್ರಿ ಏರ್ಪಡುತ್ತದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ ಹೇಳಿದರು.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ- ಸೆಪ್ಟಂಬರ್ 18, ಸೆಪ್ಟಂಬರ್ 25 ಮತ್ತು ಅಕ್ಟೋಬರ್ 1- ಚುನಾವಣೆ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಹೊರಬೀಳಲಿದೆ.
‘‘ಸಿಪಿಎಮ್ನ ತರಿಗಮಿ ಕೂಡ ನಮ್ಮೊಂದಿಗಿದ್ದಾರೆ. ನಮ್ಮ ಜನರು ಕೂಡ ನಮ್ಮೊಂದಿಗೆ ಇದ್ದಾರೆ ಎಂದು ನಾನು ಭಾವಿಸಿದ್ದೇನೆ. ಇಲ್ಲಿನ ಜನರ ಜೀವನವನ್ನು ಸುಧಾರಿಸುವುದಕ್ಕಾಗಿ ನಾವು ಬೃಹತ್ ಅಂತರದಿಂದ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ’’ ಎಂಬುದಾಗಿಯೂ ಅಬ್ದುಲ್ಲಾ ಹೇಳಿದರು.
ಎಲ್ಲಾ ಅಧಿಕಾರಗಳೊಂದಿಗೆ ರಾಜ್ಯ ಸ್ಥಾನಮಾನವು ಶೀಘ್ರವೇ ಪುನಃಸ್ಥಾಪನೆಗೊಳ್ಳುವುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ‘‘ರಾಜ್ಯ ಸ್ಥಾನಮಾನವು ನಮ್ಮೆಲ್ಲರಿಗೂ ಮುಖ್ಯವಾಗಿದೆ. ಈ ಭರವಸೆಯನ್ನು ನಮಗೆ ನೀಡಲಾಗಿತ್ತು. ಈ ರಾಜ್ಯವು ಕೆಟ್ಟ ದಿನಗಳನ್ನು ನೋಡಿದೆ. ಎಲ್ಲಾ ಅಧಿಕಾರಗಳೊಂದಿಗೆ ರಾಜ್ಯ ಸ್ಥಾನಮಾನವು ಪುನಃಸ್ಥಾಪನೆಗೊಳ್ಳುವ ದಿನವನ್ನು ನಾವು ಎದುರು ನೋಡುತ್ತಿದ್ದೇವೆ. ಅದು ಸಂಭವಿಸುವಂತೆ ಖಾತರಿಪಡಿಸುವುದಕ್ಕಾಗಿ ನಾವು ‘ಇಂಡಿಯಾ’ ಮೈತ್ರಿಕೂಟದ ಜೊತೆಗಿದ್ದೇವೆ’’ ಎಂದರು.
ಇಂಡಿಯಾ ಮೈತ್ರಿಕೂಟದ ಭಾಗೀದಾರ ಪಕ್ಷಗಳಾಗಿ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸಿದ್ದವು. ಜಮ್ಮುವಿನ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ, ಕಾಶ್ಮೀರ ಕಣಿವೆಯ ಮೂರು ಸ್ಥಾನಗಳ ಪೈಕಿ ಒಂದರಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಸೋಲನುಭವಿಸಿದೆ.
ಶೀಘ್ರ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗೆ ಕಾಂಗ್ರೆಸ್ ಬದ್ಧ: ರಾಹುಲ್
ಜಮ್ಮು ಮತ್ತು ಕಾಶ್ಮೀರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ರಾಜ್ಯ ಸ್ಥಾನಮಾನವನ್ನು ಮರಳಿಸುವುದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಶ್ರೀನಗರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಜೊತೆಗಿನ ಚುನಾವಣಾ ಮೈತ್ರಿ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ವಿಧಾನಸಭಾ ಚನಾವಣೆ ನಡೆಯುವ ಮೊದಲೇ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
‘‘ಚುನವಣಾ ಘೋಷಣೆ ಒಂದು ಧನಾತ್ಮಕ ನಡೆಯಾಗಿದೆ. ಸ್ವಾತಂತ್ರ್ಯದ ಬಳಿಕ, ಕೇಂದ್ರಾಡಳಿತ ಪ್ರದೇಶವಾಗಿ ಹಿಂಭಡ್ತಿ ಪಡೆದ ಮೊದಲ ರಾಜ್ಯ ಜಮ್ಮು ಮತ್ತು ಕಾಶ್ಮೀರವಾಗಿದೆ’’ ಎಂದು ಅವರು ಹೇಳಿದರು.