ಜಮ್ಮುಕಾಶ್ಮೀರ | ಸದನದಲ್ಲಿ ಗದ್ದಲ ಸೃಷ್ಟಿಸಿದ ಗುಲ್ಮಾರ್ಗ್ ಫ್ಯಾಷನ್ ಶೋ !

Photo | PTI
ಜಮ್ಮು,ಕಾಶ್ಮೀರ : ಗುಲ್ಮಾರ್ಗ್ ಫ್ಯಾಷನ್ ಶೋ ಜಮ್ಮು,ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಈ ಘಟನೆಯು ಸೋಮವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಪ್ರತಿಪಕ್ಷಗಳ ಶಾಸಕರು ಉಮರ್ ಅಬ್ದುಲ್ಲಾ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಸದನವು ಆರಂಭವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ , ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಶಾಸಕರು ಮತ್ತು ಇಬ್ಬರು ಸ್ವತಂತ್ರ ಶಾಸಕರು ಎದ್ದು ನಿಂತು ಈ ವಿಷಯವನ್ನು ಪ್ರಸ್ತಾಪಿಸಿದರು. ಜನರು ರಮಝಾನ್ ಉಪವಾಸ ಆಚರಿಸುತ್ತಿರುವಾಗ ಇಂತಹ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂಬ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಶಾಸಕರು ಈ ಕಾರ್ಯಕ್ರಮವನ್ನು ʼಅಶ್ಲೀಲʼ ಎಂದು ಟೀಕಿಸಿದರು ಮತ್ತು ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಈ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸಿ, ಈ ಫ್ಯಾಷನ್ ಶೋ ಆಯೋಜನೆಯಲ್ಲಿ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಈ ಕುರಿತು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಗುಲ್ಮಾರ್ಗ್ನಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಇಂತಹ ಕಾರ್ಯಕ್ರಮಗಳು ರಮಝಾನ್ ತಿಂಗಳಲ್ಲಿ ಮಾತ್ರವಲ್ಲ, ಯಾವುದೇ ತಿಂಗಳಲ್ಲಿ ಆಯೋಜಿಸಬಾರದು ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಪೀಪಲ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಖಾಸಗಿ ಎಂಬ ಹಣೆಪಟ್ಟಿ ಕಟ್ಟಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಗುಲ್ಮಾರ್ಗ್ ಫ್ಯಾಷನ್ ಶೋ ದಲ್ಲಿ ಅಶ್ಲೀಲ ಚಿತ್ರಗಳನ್ನು ಕಂಡು ತುಂಬಾ ಬೇಸರವಾಗಿದೆ. ಇಂತಹ ಘಟನೆ ರಮಝಾನ್ ತಿಂಗಳಿನಲ್ಲಿ ನಡೆದಿರುವುದು ಶೋಚನೀಯ. ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿ ಅಶ್ಲೀಲತೆಗಳನ್ನು ಉತ್ತೇಜಿಸಲು ಖಾಸಗಿ ಹೋಟೆಲ್ಗಳಿಗೆ ಅನುಮತಿಸಿರುವುದು ಸರಿಯಲ್ಲ ಎಂದು ಹೇಳಿದರು.