ಜಮ್ಮು-ಕಾಶ್ಮೀರ ಚುನಾವಣೆ: ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದ ಮಾಜಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಟಿಕೆಟ್!
PC : PTI
ಜಮ್ಮು-ಕಾಶ್ಮೀರ: ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ಮೆರವಣಿಗೆಯನ್ನು ಆಯೋಜಿಸಿದ್ದ ಬಿಜೆಪಿಯ ಮಾಜಿ ನಾಯಕ ಲಾಲ್ ಸಿಂಗ್ ಗೆ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಸೋಹ್ಲಿ ಕ್ಷೇತ್ರಕ್ಕೆ ಲಾಲ್ ಸಿಂಗ್ ಸೇರಿದಂತೆ 19 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಘೋಷಿಸಿದೆ.
2018ರಲ್ಲಿ ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದಾಗ ಆರೋಪಿಗಳನ್ನು ಬೆಂಬಲಿಸಿ ಆಯೋಜಿಸಿದ್ದ ತಿರಂಗಾ ರ್ಯಾಲಿಗೆ ಮಾಜಿ ಬಿಜೆಪಿ ನಾಯಕ ಲಾಲ್ ಸಿಂಗ್ ನೇತೃತ್ವ ವಹಿಸಿದ್ದರು.
ಲಾಲ್ ಸಿಂಗ್ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದರು. ಲಾಲ್ ಸಿಂಗ್ ಕಥುವಾ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡಿದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ನಲ್ಲೇ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಖಂಡನೆ ವ್ಯಕ್ತವಾಗಿದೆ.
ವಿವಾದದ ಹೊರತಾಗಿಯೂ, ಸಿಂಗ್ ಅವರು ಬಸೋಹ್ಲಿ ಪ್ರದೇಶದಲ್ಲಿ ಪ್ರಭಾವವನ್ನು ಮುಂದುವರಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು.
ಈ ಬಾರಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಲಾಲ್ ಸಿಂಗ್ ಗೆ ಟಿಕೆಟ್ ನೀಡುತ್ತಿದ್ದಂತೆ ಕಾಂಗ್ರೆಸ್ ನಲ್ಲಿನ ಅನೇಕ ಮುಸ್ಲಿಂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಗುಲಾಂ ನಬಿ ಆಝಾದ್ ಅವರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಝಾದ್ ಪಾರ್ಟಿ ಕೂಡ ಟೀಕಿಸಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದೆ.