ಜಮ್ಮು ಕಾಶ್ಮೀರ | ಅತ್ಯಾಚಾರಿಗಳ ಬೆಂಬಲಿಗನಿಗೆ ಟಿಕೆಟ್ ಕೊಟ್ಟ ಕಾಂಗ್ರೆಸ್ ಗೆ ಮುಖಭಂಗ
ಕಾಂಗ್ರೆಸ್ ನಾಯಕ ಚೌಧರಿ ಲಾಲ್ ಸಿಂಗ್ | PC : ANI
ಶ್ರೀನಗರ : ಯಾವುದೋ ರಾಜಕೀಯ ಲಾಭಕ್ಕಾಗಿ ಸಾಮೂಹಿಕ ಅತ್ಯಾಚಾರಿಗಳ ಬೆಂಬಲಿಗನನ್ನು ಅಪ್ಪಿಕೊಂಡ ಕಾಂಗ್ರೆಸ್ ಸತತ ಎರಡು ಬಾರಿ ಮುಖಭಂಗ ಅನುಭವಿಸಿದೆ.
ಅತ್ತ ರಾಜಕೀಯ ಲಾಭವೂ ಇಲ್ಲ, ಇತ್ತ ನೈತಿಕವಾಗಿಯೂ ಪಕ್ಷಕ್ಕೆ ಹಿನ್ನಡೆ ಎದುರಾಗಿದೆ. 8 ವರ್ಷ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳಿಗೆ ಬೆಂಬಲ ಸೂಚಿಸಿ ಮೆರವಣಿಗೆ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚೌಧರಿ ಲಾಲ್ ಸಿಂಗ್ ಸೋಲನುಭವಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ ನಾಯಕ ಚೌಧರಿ ಲಾಲ್ ಸಿಂಗ್ ಅವರು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಬಸೋಹ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ದರ್ಶನ್ ಕುಮಾರ್ ವಿರುದ್ಧ 16,034 ಮತಗಳಿಂದ ಸೋತಿದ್ದಾರೆ. ಕುಮಾರ್ ಅವರು 31,874 ಮತಗಳನ್ನು ಗಳಿಸಿದರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಲಾಲ್ ಸಿಂಗ್ ಅವರು ಒಟ್ಟು 15,840 ಮತಗಳನ್ನು ಗಳಿಸಿದ್ದಾರೆ.
2014 ರ ವಿಧಾನಸಭಾ ಚುನಾವಣೆಯಲ್ಲಿ, ಸಿಂಗ್ ಅವರು ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ಬಸೋಹ್ಲಿ ಕ್ಷೇತ್ರವನ್ನು ಗೆದ್ದಿದ್ದರು. ಆದರೆ ಈ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಮಾರ್ಚ್ನಲ್ಲಿ ಅವರು ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾದರು.
2018 ರಲ್ಲಿ, ಬಿಜೆಪಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯನ್ನು ಒಳಗೊಂಡಿರುವ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ ಅಪ್ರಾಪ್ತ ಮುಸ್ಲಿಂ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳನ್ನು ಬೆಂಬಲಿಸುವ ರ್ಯಾಲಿಯಲ್ಲಿ ಭಾಗವಹಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು. ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ಲಾಲ್ ಸಿಂಗ್ ಅವರು ಅತ್ಯಾಚಾರ ಆರೋಪಿಗಳಿಗೆ ಬೆಂಬಲ ನೀಡಿದ್ದ ಬಳಿಕ ದೇಶದಾದ್ಯಂತ ಎದ್ದ ಆಕ್ರೋಶದ ಕಾರಣ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಆದರೆ ಆ ಬಳಿಕ ಲಾಲ್ ಸಿಂಗ್ ಕಾಂಗ್ರೆಸ್ ಗೆ ಮರಳಿದ್ದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರಾ ಕಾಶ್ಮೀರಕ್ಕೆ ಬಂದಾಗ ಅದರಲ್ಲಿ ಲಾಲ್ ಸಿಂಗ್ ಭಾಗವಹಿಸಿ ಆ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅವರಿಗೆ ಉಧಂಪುರ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.
ಡೋಗ್ರಾ ಸಮುದಾಯದ ನಾಯಕ ಲಾಲ್ ಸಿಂಗ್ ಬಂದರೆ ಜಮ್ಮು ವಿಭಾಗದಲ್ಲಿ ಪಕ್ಷಕ್ಕೆ ಲಾಭ ಆಗುತ್ತೆ ಎಂದು ಕಾಂಗ್ರೆಸ್ ಇವರನ್ನು ಸೇರಿಸಿಕೊಂಡಿತ್ತು. ಆದರೆ ಪಕ್ಷದೊಳಗೇ ಲಾಲ್ ಸಿಂಗ್ ಸೇರ್ಪಡೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಸೆಪ್ಟೆಂಬರ್ನಲ್ಲಿ, ಮಾಜಿ ನಾಗರೀಕ ಸೇವಾ ಅಧಿಕಾರಿಗಳ ಗುಂಪೊಂದು, ವಿಧಾನಸಭೆ ಚುನಾವಣೆಯಲ್ಲಿ ಸಿಂಗ್ ಅವರನ್ನು ಕಣಕ್ಕಿಳಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಟೀಕಿಸಿತ್ತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದ ನಿವೃತ್ತ ಅಧಿಕಾರಿಗಳು ಸಿಂಗ್ ಅವರ ನಾಮನಿರ್ದೇಶನವು "ದ್ವೇಷದ ರಾಜಕೀಯದ ವಿರುದ್ಧ ಹೋರಾಟವನ್ನು ಮುನ್ನಡೆಸುವ ಕಾಂಗ್ರೆಸ್ ಪಕ್ಷ ವಾದಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.
ಕಥುವಾ ಅತ್ಯಾಚಾರಿ ಆರೋಪಿಗಳ ಬೆಂಬಲಿಗನಿಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ ಅನ್ನು ಸದಾ ಕಾಡುತ್ತಲೇ ಬಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಮತ್ತೆ ಟಿಕೆಟ್ ನೀಡಿತ್ತು. ಪಕ್ಷದೊಳಗಿನ ಅನೇಕರು, ವಿಶೇಷವಾಗಿ ಮುಸ್ಲಿಂ ಮುಖಂಡರು ಲಾಲ್ ಸಿಂಗ್ ಗೆ ಟಿಕೆಟ್ ನೀಡಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಖಂಡನೆ ಜೋರಾಗಿಯೇ ಕೇಳಿಬಂದಿತ್ತು.
ರಾಹುಲ್ ಗಾಂಧೀ ಕೊಲ್ಕತ್ತಾ ಅತ್ಯಾಚಾರದ ವಿಷಯದಲ್ಲಿ ಮಾತನಾಡಿದಾಗ ಟಿ ಎಂ ಸಿ ಸಂಸದ ಸಾಕೇತ್ ಗೋಖಲೆ ರಾಹುಲ್ ಗಾಂಧಿಗೆ ಕಥುವಾ ಕುರಿತು ನೆನಪಿಸಿದ್ದರು. ಕಾಂಗ್ರೆಸ್ ಹೇಗೆ ಅತ್ಯಾಚಾರ ಪ್ರಕರಣದ ಬೆಂಬಲಿಗರ ಜೊತೆ ನಿಂತಿತ್ತು ಎಂಬುದನ್ನು ಸಾಕೆತ್ ಗೋಖಲೆ ನೆನಪಿಸಿದ್ದರು.
ಕಾಂಗ್ರೆಸ್ನೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಲಾಲ್ ಸಿಂಗ್, ಬಿಜೆಪಿ ಸೇರಿದ್ದರು. ನಂತರ 2019 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಡೋಗ್ರಾ ಸ್ವಾಭಿಮಾನ್ ಪಕ್ಷವನ್ನೂ ಇವರು ಈ ಮಧ್ಯೆ ಸ್ಥಾಪಿಸಿದ್ದರು. ಕಥುವಾದಲ್ಲಿ ಪುಟ್ಟ ಬಾಲಕಿಯ ಸಾಮೂಹಿಕ ಅತ್ಯಾಚಾರಿಗಳನ್ನು ಬಹಿರಂಗವಾಗಿ ಬೆಂಬಲಿಸಿ ಮೆರವಣಿಗೆ ಮಾಡಿದ್ದ ಲಾಲ್ ಸಿಂಗ್ ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು, ಆತನನ್ನು ರಾಹುಲ್ ಗಾಂಧೀ ಸೇರಿ ಕಾಂಗ್ರೆಸ್ ನಾಯಕರೆಲ್ಲ ಸ್ವಾಗತಿಸಿದ್ದು ಇಡೀ ಯಾತ್ರೆಯ ಪಾಲಿನ ದೊಡ್ಡ ಕಪ್ಪು ಚುಕ್ಕೆಯಾಗಿತ್ತು.
ಈಗ ನೋಡಿದರೆ ಅತ್ಯಾಚಾರ ಕೊಲೆ ಆರೋಪಿಗಳನ್ನು ಬೆಂಬಲಿಸಿದವನಿಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್ ಗೆ ಎಲ್ಲ ರೀತಿಯಲ್ಲೂ ನಷ್ಟ ಉಂಟು ಮಾಡಿದೆ. ಸೈದ್ಧಾಂತಿಕವಾಗಿ ಹೇಗೂ ನಷ್ಟ ತಂದಿತ್ತು. ರಾಹುಲ್ ಗಾಂಧೀ ಯವರ ಮೊಹಬ್ಬತ್ ಕಿ ದುಖಾನ್ ಘೋಷಣೆಗೆಗೂ ಲಾಲ್ ಸಿಂಗ್ ಒಂದು ಕಪ್ಪು ಚುಕ್ಕೆ. ಆದರೆ ಇದೀಗ ಸೋಲಿನಿಂದಾಗಿ ಚುನಾವಣಾ ಲಾಭವೂ ಕಾಂಗ್ರೆಸ್ ಗೆ ಸಿಗದೇ ಹೋಗಿದೆ.
ಜಮ್ಮು ವಿಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಕಾಂಗ್ರೆಸ್ ತೀರಾ ಕಳಪೆ ಪ್ರದರ್ಶನ ತೋರಿದೆ. ಅದರ ಜೊತೆಜೊತೆಗೆ ಈ ಲಾಲ್ ಸಿಂಗ್ ನಿಂದ ಪಕ್ಷಕ್ಕೆ ಲಾಭ ಆಗುವುದಕ್ಕಿಂತ ಹೆಚ್ಚು ನಷ್ಟವೇ ಆಗಿದೆ. ಈ ವ್ಯಕ್ತಿಯನ್ನು ದೂರ ಇಟ್ಟಿದ್ದರೇ ಕನಿಷ್ಠ, ನೈತಿಕವಾಗಿಯಾದರೂ ಕಾಂಗ್ರೆಸ್ ರಾಜಿ ಮಾಡಿಕೊಳ್ಳಲಿಲ್ಲ ಎಂದು ಹೇಳಿಕೊಳ್ಳಬಹುದಿತ್ತು.