ಜಮ್ಮು ಕಾಶ್ಮೀರ | ಉಗ್ರರ ವಿರುದ್ಧದ ಕಾರ್ಯಾಚರಣೆ: ಅಧಿಕ ಸಾವು ನೋವಿಗೆ ಗುಪ್ತಚರ ಕೊರತೆ ಕಾರಣ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಧಿಕ ಸಾವು ನೋವಿಗೆ, ಮಾನವ ಗುಪ್ತಚರ ಮತ್ತು ಸಿಗ್ನಲ್ ಇಂಟೆಲಿಜೆನ್ಸ್ ಪ್ರಮುಖ ಕಾರಣ ಎಂಬ ಅಂಶ ಬಹಿರಂಗವಾಗಿದೆ. ಇದಕ್ಕೆ ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಚೀನಾ ಗಡಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಸೇನೆಯ ದಟ್ಟಣೆ ಕಡಿಮೆಯಾಗಿದ್ದು, ಉಗ್ರರು ಮಿಲಿಟರಿ ಶೈಲಿಯ ದಾಳಿಗಳನ್ನು ನಡೆಸಲು ಇದು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಪಿರ್ ಪಂಜಲ್ ಪ್ರದೇಶದಲ್ಲಿ ಉಗ್ರರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಭೆಗಳಲ್ಲಿ ಈ ಅಂಶ ಚರ್ಚೆಗೆ ಬಂದಿದೆ. ಜಮ್ಮು ಪ್ರದೇಶಕ್ಕೆ ಹೆಚ್ಚುವರಿ ಸೇನೆ ಮತ್ತು ಕೇಂದ್ರೀಯ ಪಡೆಗಳನ್ನು ಮಾತ್ರವಲ್ಲದೇ ತಂತ್ರಜ್ಞಾನವನ್ನೂ ನಿಯೋಜಿಸಲು ಗುರುವಾರ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಪರಿಸ್ಥಿತಿ ಸ್ಥಿರಗೊಳ್ಳಲು ಇನ್ನಷ್ಟು ಸಮಯ ಕಾಯಬೇಕಾದೀತು ಎಂದು ಸಭೆಯಲ್ಲಿ ವಿವರಿಸಲಾಗಿದೆ.
"ಇದು ದೊಡ್ಡ ಪ್ರದೇಶ ಹಾಗೂ ಕಠಿಣ ಪರ್ವತಶ್ರೇಣಿ ಮತ್ತು ಕಾಡು, ಕಣಿವೆಗಳಿಂದ ಹಾಗೂ ಗುಹೆ ಮತ್ತು ಅಡಗುದಾಣಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಸುಮಾರು 35-40 ಮಂದಿ ಯುದ್ಧ ಪರಿಣತ ಉಗ್ರರಿದ್ದಾರೆ. ಇವರು ಪುಟ್ಟ ತಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕ ಮಂದಿ ಪಾಕಿಸ್ತಾನ ಮೂಲದವರಾಗಿದ್ದು, ಜೈಶ್ ಇ ಮುಹ್ಮದ್ ಸಂಘಟನೆಗೆ ಸೇರಿದವರು ಎಂಬ ಅಂಶ ಗುಪ್ತಚರ ಮಾಹಿತಿಯಿಂದ ತಿಳಿದು ಬಂದಿದೆ.