ಜಮ್ಮು/ ಕಾಶ್ಮೀರ: ಉಗ್ರರ ಗುಂಡಿನ ದಾಳಿಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೃತ್ಯು

Photo: India Today
ಶ್ರೀನಗರ ಡಿ.24: ಉಗ್ರರ ಗುಂಡೇಟಿಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಬಾರಾಮುಲ್ಲಾ ಜಿಲ್ಲೆಯಲ್ಲಿ ರವಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತ ಪೊಲೀಸ್ ಅಧಿಕಾರಿಯನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶಫಿ ಮಿರ್ ಎಂದು ಗುರುತಿಸಲಾಗಿದೆ. ಶೀರಿ ಬಾರಾಮುಲ್ಲಾದ ಗಂಟ್ಮುಲ್ಲಾ ಪ್ರದೇಶದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
“ಶೀರಿ ಬಾರಾಮುಲ್ಲಾದ ಗಂಟ್ಮುಲ್ಲಾದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಮುಹಮ್ಮದ್ ಶಫಿ ಅವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ವೇಳೆ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಪ್ರದೇಶವನ್ನು ಪೊಲೀಸ್ ಪಡೆ ಸುತ್ತುವರೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಶ್ರೀನಗರದ ಈದ್ಗಾ ಮಸೀದಿ ಬಳಿ ಮೈದಾನದಲ್ಲಿ ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಇನ್ಸ್ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಉಗ್ರರ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.