ಝಾನ್ಸಿ ಆಸ್ಪತ್ರೆ ಅಗ್ನಿ ದುರಂತ: ಹಲವು ಶಿಶುಗಳನ್ನು ಉಳಿಸಿ ತನ್ನ ಅವಳಿ ಪುತ್ರಿಯರನ್ನು ಕಳೆದುಕೊಂಡ ಯುವ ತಂದೆ ಯಾಕೂಬ್ ಮನ್ಸೂರಿ
PC: x.com/harshaag
ಝಾನ್ಸಿ: ಇಪ್ಪತ್ತರ ಆಸುಪಾಸಿನ ಯುವಕ ಯಾಕೂಬ್ ಮನ್ಸೂರಿ ಶುಕ್ರವಾರ ರಾತ್ರಿ ಹಲವು ಪುಟ್ಟ ಮಕ್ಕಳ ಪಾಲಿಗೆ ಹೀರೊ. ಆದರೆ ಅವರದ್ದೇ ನವಜಾತ ಅವಳಿ ಹೆಣ್ಣುಮಕ್ಕಳನ್ನು ಇಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಉಳಿಸಲಾಗಲಿಲ್ಲ!
ಮೂಲತಃ ಹಮೀರ್ ಪುರದವರಾದ ಯಾಕೂಬ್ ಆಹಾರ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರು. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದ ಹೊರಗೆ ಮಲಗಿದ್ದರು. ಇಲ್ಲಿ ಅವರ ಇಬ್ಬರು ನವಜಾತ ಹೆಣ್ಣುಮಕ್ಕಳು ದಾಖಲಾಗಿದ್ದರು. ಪತ್ನಿ ನಜ್ಮಾ ಜತೆ ಯಾಕೂಬ್ ಮಕ್ಕಳ ಆರೈಕೆಗಾಗಿ ಉಳಿದಿದ್ದರು.
ಶುಕ್ರವಾರ ರಾತ್ರಿ ಅಗ್ನಿದುರಂತ ಸಂಭವಿಸಿದಾಗ ಕಿಟಕಿ ಗಾಜು ಒಡೆದು ಯಾಕೂಬ್ ಮಕ್ಕಳ ರಕ್ಷಣೆಗಾಗಿ ತೀವ್ರ ನಿಗಾ ಘಟಕಕ್ಕೆ ಧಾವಿಸಿದರು. ಸಾಧ್ಯವಾದಷ್ಟು ಮಕ್ಕಳನ್ನು ರಕ್ಷಿಸಿದರು. ಆದರೆ ಅವರು ರಕ್ಷಿಸಿದ ಮಕ್ಕಳಲ್ಲಿ ಅವರ ಇಬ್ಬರು ನವಜಾತ ಹೆಣ್ಣುಮಕ್ಕಳಿರಲಿಲ್ಲ. ಅವಳಿ ಮಕ್ಕಳ ಮೃತದೇಹ ಶನಿವಾರ ಪತ್ತೆಯಾಯಿತು. ನಜ್ಮಾ ಮತ್ತು ಯಾಕೂಬ್ ಆಸ್ಪತ್ರೆಯ ಹೊರಗೆ ದಿನವಿಡೀ ಕಾದರು. ಅವರ ಮುಖದಲ್ಲಿ ದುಃಖ ಮಡುಗಟ್ಟಿತ್ತು.
ಅಂತೆಯೇ ಸಂಜನಾ ಕುಮಾರಿ ಮೊದಲ ಮಗುವಿಗೆ ಸ್ವಲ್ಪ ಹೊತ್ತಿನ ಮುನ್ನ ಜನ್ಮ ನೀಡಿದ್ದರು. ಆದರೆ ಅವರ ಸಂಭ್ರಮ ಸೂತಕವಾಗಿ ಮಾರ್ಪಟ್ಟಿತು. "ನನ್ನ ಕಣ್ಣೆದುರೇ ನನ್ನ ನವಜಾತ ಶಿಶು ಸುಟ್ಟು ಕರಕಲಾಯಿತು. ನಾನು ಅಸಹಾಯಕಗಳಾಗಿ ನೋಡುತ್ತಾ ಕೂರಬೇಕಾಯಿತು. ಆಸ್ಪತ್ರೆಯ ನಿರ್ಲಕ್ಷ್ಯ ನನ್ನ ಕನಸುಗಳನ್ನು ನಾಶಪಡಿಸಿತು. ನಾನು ಮಗುವನ್ನು ಎತ್ತಿಕೊಳ್ಳಲೂ ಸಾಧ್ಯವಾಗಲ್ಲ" ಎಂದು ಉಕ್ಕಿ ಬರುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಾ ಘಟನೆಯನ್ನು ನೆನಪಿಸಿಕೊಂಡರು.
ಜಲೂನ್ ನ ಸಂತೋಷಿ ದೇವಿ ಕೂಡಾ ಹೆರಿಗೆ ಸಂದರ್ಭದ ಆರೋಗ್ಯ ಸಮಸ್ಯೆಯಿಂದಾಗಿ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಅಗ್ನಿ ಆಕಸ್ಮಿಕ ಸಂಭವಿಸಿದಾಗ, ಮಗು ಗೊಂದಲದಲ್ಲಿ ಕೈ ತಪ್ಪಿತು. ಆದರೆ ಮಗುವಿನ ಮೃತದೇಹವನ್ನು ಶನಿವಾರ ಗುರುತಿಸಲಾಯಿತು. "ದೊಡ್ಡ ಚೀರಾಟಗಳು ಕೇಳಿಬಂದವು. ನನ್ನ ಮಗು ಮೃತಪಟ್ಟಿತು" ಎಂದು ದುಃಖಿಸಿದರು. ಕೇವಲ 11 ದಿನಗಳ ಹಿಂದೆ ಹಡೆದ ಮಗು ಇವರ ಪಾಲಿಗೆ ಉಳಿಯಲಿಲ್ಲ. "ದೊಡ್ಡ ಸದ್ದು ಕೇಳಿತು. ನಾನು ಓಡಿ ಹೋದೆ. ಆದರೆ ಮಗುವನ್ನು ಹೇಗೆ ರಕ್ಷಿಸುವುದು? ಹೀಗಾಗುತ್ತಿದೆ ಎಂದು ಯಾರೂ ಹೇಳಲಿಲ್ಲ" ಎಂದು ಕಣ್ಣೀರಿಟ್ಟರು. ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗಿದ್ದ ಸೋನು ಮತ್ತು ಸಂಜನಾ ಅವರ ಮಗು ಕೂಡಾ ದುರಂತದಲ್ಲಿ ಕೊನೆಯುಸಿರೆಳೆಯಿತು.