ಹೊಸ ಸ್ಟ್ರೀಮಿಂಗ್ ಪ್ಲಾಟ್ಫಾರಂ ಜಿಯೋ ಹಾಟ್ಸ್ಟಾರ್ಗೆ ಚಾಲನೆ

PC: x.com/Ott_updates
ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾವನ್ನು ವಿಲೀನಗೊಳಿಸಿ ಇತ್ತೀಚೆಗೆ ರೂಪುಗೊಂಡಿರುವ ಜಂಟಿ ಸಹಭಾಗಿತ್ವದ ಜಿಯೊಸ್ಟಾರ್, ಶುಕ್ರವಾರ ಜಿಯೋ ಹಾಟ್ಸ್ಟಾರ್ ಎಂಬ ಹೊಸ ಸ್ಟ್ರೀಮಿಂಗ್ ಪ್ಲಾಟ್ಫಾರಂ ಆರಂಭವನ್ನು ಘೋಷಿಸಿದೆ. ಇದು ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್ಸ್ಟಾರ್ ನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ.
"ಎಲ್ಲ ಭಾರತೀಯರಿಗೆ ನೈಜವಾಗಿ ಲಭ್ಯವಾಗಲಿರುವ ಪ್ರೀಮಿಯಂ ಮನೋರಂಜನಾ ತಾಣವನ್ನು ರೂಪಿಸುವ ಉದ್ದೇಶವಿದೆ" ಎಂದು ಜಿಯೋ ಹಾಟ್ಸ್ಟಾರ್ ಸಿಇಓ ಕಿರಣ್ ಮಣಿ ಪ್ರಕಟಿಸಿದ್ದಾರೆ. 10 ಭಾರತೀಯ ಭಾಷೆಗಳಲ್ಲಿ 140 ಕೋಟಿ ಭಾರತೀಯರಿಗೆ ಕಾಯಕ್ರಮಗಳನ್ನು ನಿರ್ಮಿಸಲಾಗುತ್ತದೆ. ಜಿಯೋ ಹಾಟ್ಸ್ಟಾರ್ ವೀಕ್ಷಕರಿಗೆ ತಮ್ಮ ಫೇವರಿಟ್ ಶೋಗಳನ್ನು, ಚಲಚಿತ್ರಗಳನ್ನು ಮತ್ತು ಕ್ರೀಡಾ ನೇರಪ್ರಸಾರವನ್ನು ಏಕೈಕ ಆ್ಯಪ್ ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಿದೆ ಎಂದು ವಿವರಿಸಿದರು.
ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್ಸ್ಟಾರ್ ಗ್ರಾಹಕರು ಸುಲಭವಾಗಿ ಹೊಸ ಪ್ಲಾಟ್ಫಾರಂಗೆ ವರ್ಗಾವಣೆಗೊಳ್ಳಬಹುದಾಗಿದೆ ಎಂದು ಜಿಯೋ ಹಾಟ್ಸ್ಟಾರ್ ಹೇಳಿಕೆ ನೀಡಿದೆ. ತಾಜಾ ಕಾರ್ಯಕ್ರಮಗಳ ಜತೆಗೆ ಜಿಯೋ ಹಾಟ್ಸ್ಟಾರ್, ಎನ್ಬಿಸಿ ಯುನಿವರ್ಸಲ್ ಪಿಕಾಕ್, ವಾರ್ನರ್ ಬ್ರೋಸ್, ಡಿಸ್ಕವರಿ, ಎಚ್ಬಿಓ ಮತ್ತು ಪಾರಾಮೌಂಟ್ ಗಳಿಂದ ಕೂಡಾ ಕಾರ್ಯಕ್ರಮಗಳನ್ನು ಕಲೆಹಾಕಲಿದೆ.
ದೇಶದ ಅತಿದೊಡ್ಡ ಡಿಜಿಟಲ್ ಸೃಷ್ಟಿ ಸಂಸ್ಥೆ ಸ್ಪಾರ್ಕ್ಸ್ ಕೂಡಾ ಜಿಯೋ ಹಾಟ್ಸ್ಟಾರ್ ಗೆ ಚಾಲನೆ ನೀಡಲಿದೆ. ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಐಪಿಎಲ್, ಡಬ್ಲ್ಯುಪಿಎಲ್ ಮತ್ತು ಐಸಿಸಿ ಟೂರ್ನಿಗಳನ್ನು ಕೂಡಾ ಇದು ಪ್ರಸ್ತುತಪಡಿಸಲಿದೆ. ಪ್ರಿಮಿಯರ್ ಲೀಗ್, ವಿಂಬಲ್ಡನ್ ಮತ್ತು ಪ್ರೊ ಕಬಡ್ಡಿ ಮತ್ತು ಐಎಸ್ಎಲ್ ನಂಥ ದೇಶಿ ಲೀಗ್ಗಳು ಕೂಡಾ ಇದರ ಮೂಲಕ ಪ್ರಸಾರವಾಗಲಿವೆ.
ಮಾಸಿಕ 149 ರೂಪಾಯಿ ಅಥವಾ ವಾರ್ಷಿಕ 499 ರೂಪಾಯಿ ದರದಲ್ಲಿ ಒಂದು ಮೊಬೈಲ್ ಪ್ಲಾನ್ ಲಭ್ಯವಿದ್ದು, ಕ್ರಮವಾಗಿ 299 ಮತ್ತು 899 ರೂಪಾಯಿ ದರದಲ್ಲಿ ಮೊಬೈಲ್, ವೆಬ್ ಮತ್ತು ಲಿವಿಂಗ್ ರೂಂ ಪ್ಲಾಟ್ಫಾರಂಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಪ್ರೀಮಿಯಂ ಪ್ಲಾನ್ ಅಡಿಯಲ್ಲಿ ಮಾಸಿಕ 499 ಹಾಗೂ ವಾರ್ಷಿಕ 1499 ರೂಪಾಯಿ ದರದಲ್ಲಿ ನೇರಪ್ರಸಾರದ ಕಾರ್ಯಕ್ರಮ ಹೊರತುಪಡಿಸಿ ಇತರ ಕಾರ್ಯಕ್ರಮಗಳ ಜಾಹೀರಾತು ಮುಕ್ತ ವೀಕ್ಷಣಾ ಪ್ಲಾನ್ ಗಳು ಲಭ್ಯವಿರುತ್ತವೆ.