‘ಜ್ಞಾನವಾಪಿ ಮಸೀದಿಯೂ ಅಲ್ಲ ಮಂದಿರವೂ ಅಲ್ಲ, ಅದು ಬೌದ್ಧ ಮಠ’: ಸುಪ್ರೀಂ ಕೋರ್ಟ್‌ನಲ್ಲಿ ದಾವೆ
ಹೊಸದಿಲ್ಲಿ: “ಜ್ಞಾನವಾಪಿ ದೇವಾಲಯಯೂ ಅಲ್ಲ, ಮಸೀದಿಯೂ ಅಲ್ಲ, ಬದಲಾಗಿ ಪುರಾತನ ಬೌದ್ಧ ಮಠವಾಗಿದೆ” ಬೌದ್ಧ ಧರ್ಮದ ನಾಯಕ ಸುಮಿತ್ ರತನ್ ಭಂತೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಬೌದ್ಧ ಧರ್ಮದ ನಾಯಕ ಸುಮಿತ್ ರತನ್ ಭಂತೆ ಅವರು ಬೌದ್ಧ ಮಠದ ಪುರಾವೆಗಳನ್ನು ನೋಡಲು ಪ್ರತ್ಯೇಕ ಸಮೀಕ್ಷೆಗೆ ಒತ್ತಾಯಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಜ್ಞಾನವಾಪಿಯಲ್ಲಿ ಕಂಡುಬರುವ ತ್ರಿಶೂಲ್ ಮತ್ತು ಸ್ವಸ್ತಿಕ ಚಿಹ್ನೆಗಳು ಬೌದ್ಧ ಧರ್ಮಕ್ಕೆ ಸೇರಿವೆ ಎಂದು ಭಂತೆ ಪ್ರತಿಪಾದಿಸಿದ್ದು, ಬೌದ್ಧ ಮಠಗಳನ್ನು ಕೆಡವಿ ನಿರ್ಮಿಸಲಾದ ಅನೇಕ ದೇವಾಲಯಗಳು ದೇಶಾದ್ಯಂತ ಇವೆ ಎಂದು ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅವರು ಹೇಳಿದ್ದಾರೆ.
ಇಂದು ಮುಂಜಾನೆ, ಅಲಹಾಬಾದ್ ಹೈಕೋರ್ಟ್ ಮಂದಿರದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜ್ಞಾನವಾಪಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತ್ತು.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಿದೆ. ಜುಲೈ 27 ರಂದು ನ್ಯಾಯಾಲಯವು ಪ್ರಕರಣದ ಆದೇಶವನ್ನು ಆಗಸ್ಟ್ 3 ಕ್ಕೆ ಕಾಯ್ದಿರಿಸಿತ್ತು.