ನಿರುದ್ಯೋಗ, ಹಣದುಬ್ಬರ ಪ್ರಮುಖ ಚುನಾವಣಾ ವಿಷಯಗಳು :Lokniti-CSDS ಸಮೀಕ್ಷೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಅರ್ಧದಷ್ಟು ಮತದಾರರ ಪ್ರಮುಖ ಕಳಕಳಿಯ ಅಂಶವಾಗಿದೆ ಎಂದು ಸಿಎಸ್ಡಿಎಸ್-ಲೋಕನೀತಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಚುನಾವಣಾಪೂರ್ವ ಸಮೀಕ್ಷೆಯ ಮೊದಲ ಭಾಗದ ಸರಣಿ ಲೇಖನಗಳಲ್ಲಿ ಇದು ಮಹತ್ವದ ಅಂಶವಾಗಿದೆ.
ಸಮೀಕ್ಷೆಗೆ ಗುರಿಪಡಿಸಿದವರಲ್ಲಿ ಬಹುತೇಕ ನರಗವಾಸಿಗಳು (ಶೇ. 65) ಸೇರಿದಂತೆ ಶೇಕಡ 62ರಷ್ಟು ಮಂದಿ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ (ಶೇ. 62) ಮತ್ತು ಪಟ್ಟಣ (ಶೇ. 59)ದ ಬಹುಪಾಲು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುರುಷರಲ್ಲಿ ಶೇಕಡ 65ರಷ್ಟು ಮಂದಿ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದರೆ, ಶೇಕಡ 59ರಷ್ಟು ಮಹಿಳೆಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡ 12ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯುವುದು ಸುಲಭ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ 67% ಮುಸ್ಲಿಮರು ಈಗ ಕೆಲಸ ಸಿಗೋದು ಕಷ್ಟ ಎಂದಿದ್ದರೆ , ಹಿಂದುಳಿದ ವರ್ಗಗಳು ಹಾಗು ದಲಿತರಲ್ಲಿ 63% ಜನ ಇದೇ ಅಭಿಪ್ರಾಯ ಹೇಳಿದ್ದಾರೆ. ಪರಿಶಿಷ್ಟ ವರ್ಗಗಳ 59% ಜನರೂ ಈಗ ಕೆಲಸ ಸಿಗೋದು ಕಷ್ಟ ಎಂದಿದ್ದಾರೆ. ಮೇಲ್ಜಾತಿಗಳ ಹಿಂದುಗಳಲ್ಲಿ 17% ಜನ ಉದ್ಯೋಗ ಸಿಗೋದು ಈಗ ಸುಲಭ ಎಂದಿದ್ದರೆ, ಅದೇ ಮೇಲ್ಜಾತಿಗಳ 57% ಜನ ಈಗ ಉದ್ಯೋಗ ಸಿಗೋದು ಕಷ್ಟ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬೆಲೆ ಏರಿಕೆ ಹೆಚ್ಚಿದೆಯೇ ಕಡಿಮೆಯಾಗಿದೆಯೇ ಎಂದು ಕೇಳಿದ್ದಕ್ಕೆ 71% ಜನ ಬೆಲೆ ಏರಿಕೆ ಹೆಚ್ಚಾಗುತ್ತಲೇ ಹೋಗಿದೆ ಎಂದಿದ್ದಾರೆ. ಬಡವರಲ್ಲಿ 76% ಜನ, ಮುಸ್ಲಿಮರಲ್ಲಿ 76% ಜನ ಹಾಗು ಪರಿಶಿಷ್ಟ ವರ್ಗಗಳಲ್ಲಿ 75% ಜನ ಬೆಲೆಗಳು ಹೆಚ್ಚುತ್ತಲೇ ಹೋಗಿವೆ ಎಂದಿದ್ದಾರೆ. ಇದು ಬಹಳ ದೊಡ್ಡ ಪ್ರಮಾಣ.
ಕಳೆದ ಐದು ವರ್ಷಗಳಲ್ಲಿ ನಮ್ಮ ಜೀವನ ಮಟ್ಟ ಕೆಟ್ಟದಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ 35% ಹೇಳಿದ್ದಾರೆ. 48% ಜನರು ತಮ್ಮ ಜೀವನ ಮಟ್ಟ ಸ್ವಲ್ಪ ಸುಧಾರಿಸಿದೆ ಎಂದಿದ್ದರೆ 14% ಜನರು ಐದು ವರ್ಷಗಳ ಹಿಂದೆ ಇದ್ದ ಹಾಗೇ ಇದೆ ಎಂದಿದ್ದಾರೆ. ಕೇವಲ 22% ಜನರು ತಮ್ಮ ಕುಟುಂಬದ ಆದಾಯದಿಂದ ತಮ್ಮ ಅಗತ್ಯಗಳನ್ನು ಈಡೇರಿಸಿಕೊಂಡು ಉಳಿತಾಯ ಮಾಡಬಹುದು ಎಂದು ಹೇಳಿದ್ದರೆ, 36% ಜನರು ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದು, ಆದರೆ ಉಳಿತಾಯ ಮಾಡುವುದು ಅಸಾಧ್ಯ ಎಂದಿದ್ದಾರೆ. 23% ಜನ ಅಗತ್ಯ ಈಡೇರಿಸಿಕೊಳ್ಳುವುದೇ ಕಷ್ಟ ಎಂದಿದ್ದರೆ 12% ಜನರು ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.