ವೇಶ್ಯಾವಾಟಿಕೆ ಬಗ್ಗೆ ಹಾಸ್ಯ: ಮಹಿಳಾ ಸ್ಟಾಂಡ್ಅಪ್ ಕಾಮೆಡಿಯನ್ ವಿರುದ್ಧ ನೆಟ್ಟಿಗರ ಆಕ್ರೋಶ
PHOTO : Video grab x/@DrMann1995
ಮುಂಬೈ: ವೇಶ್ಯವಾಟಿಕೆಯನ್ನು ಉತ್ತಮ ಉದ್ಯೋಗ ಎಂದು ಹೇಳುವ ಮೂಲಕ ಮಹಿಳಾ ಸ್ಟಾಂಡ್-ಅಪ್ ಕಾಮೆಡಿಯನ್ ವಿದುಶಿ ಸ್ವರೂಪ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ವಿದುಶಿ ಸ್ವರೂಪ್ ಅವರು ವೇಶ್ಯಾವಾಟಿಕೆ ಬಗ್ಗೆ ಮಾಡಿರುವ ಜೋಕ್ಗಳು ಟೀಕೆಗೆ ಗುರಿಯಾಗಿದ್ದು, ಆ ಜೋಕ್ಗೆ ನಕ್ಕ ಪ್ರೇಕ್ಷಕರ ಬಗ್ಗೆಯೂ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ವೇಶ್ಯಾವಟಿಕೆ ಉತ್ತಮ ವೃತ್ತಿ ಎಂದು ನಾನು ಭಾವಿಸುತ್ತೇನೆ. ಈ ಕ್ಷೇತ್ರದಲ್ಲಿ ಮಾತ್ರ ಅನುಭವಿಗಳಿಗಿಂತ ಅನನುಭವಿಗಳಾದ ಫ್ರೆಶರ್ಗಳಿಗೆ ಬೇಡಿಕೆ ಜಾಸ್ತಿ. ಸಿಇಒಗಿಂತ ಇಂಟರ್ನ್ಗಳು ಹೆಚ್ಚು ದುಡಿಯಲು ಅವಕಾಶ ಇರುವುದು ಈ ಕ್ಷೇತ್ರದಲ್ಲಿ ಮಾತ್ರ ಎಂದು ವಿದುಶಿ ಹೇಳಿದ್ದಾರೆ. ಇದಕ್ಕೆ ಸಭಿಕರು ನಕ್ಕು ಪ್ರೋತ್ಸಾಹಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿದುಶಿ ಹಾಗೂ ಸಭಿಕರ ವಿರುದ್ಧ ಟೀಕೆಗಳು ಕೇಳಿ ಬಂದಿದೆ.
ಇದು ಅತ್ಯಂತ ನಾಚಿಕೆಗೇಡು, ಇದರಲ್ಲಿ ತಮಾಷೆ ಎಲ್ಲಿದೆ? ಅಸಹ್ಯ ಮಾತ್ರ ಇದೆ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.
ಅರಿವಿಲ್ಲದ ಮೂಢರಷ್ಟೇ ವೇಶ್ಯಾವಾಟಿಕೆ ಬಗ್ಗೆ ತಮಾಷೆಗಳನ್ನು ಮಾಡಬಹುದು. ವೇಶ್ಯವಾಟಿಕೆ ಹಿಂದೆ ಇರುವ ಮಕ್ಕಳ ಅಕ್ರಮ ಸಾಗಾಟ, ಅಪಹರಣದ ಜಾಲ, ಬಡತನದ ಸುಳಿಯ ಅರಿವಿದ್ದಿದ್ದರೆ ಇಂತಹ ಜೋಕ್ಗಳನ್ನು ಮಾಡಲಾರರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಖ್ಯಾತ ಕವಿ, ಡಾ. ಕುಮಾರ್ ವಿಶ್ವಾಸ್ ಪ್ರತಿಕ್ರಿಯಿಸಿ, “ಇದು ಕೇವಲ ಅಸಂಬದ್ಧ ಮಾತ್ರವಲ್ಲ. ಅಮಾನವೀಯ ಮತ್ತು ಕ್ರೂರವಾಗಿದೆ. ಈ ಸಂವೇದನಾಶೀಲವಲ್ಲದ ಹಾಸ್ಯವು ಅಸಭ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನಿರಂತರವಾಗಿ ಗೇಲಿ ಮಾಡುವ ಇಂದಿನ ಸ್ಟ್ಯಾಂಡ್-ಅಪ್ ಪ್ರಸ್ತುತಿಗಳ ಒಂದು ನೋಟವಾಗಿದೆ. ಯಾವ ಪುರುಷ ನಿರೂಪಕನೂ ಈ ಹೀನ ಕೆಲಸ ಮಾಡದಿರುವುದು ಭಾಗ್ಯ, ಇಲ್ಲದಿದ್ದರೆ ಆಯೋಗಗಳೆಲ್ಲವೂ ಎಚ್ಚೆತ್ತುಕೊಳ್ಳುತ್ತಿದ್ದವು. ನಕ್ಕವರಿಗೆ ನಾಚಿಕೆಯಾಗಬೇಕು” ಎಂದು ಟ್ವೀಟ್ ಮಾಡಿದ್ದಾರೆ.