ಛತ್ತೀಸ್ ಗಢ | ಪತ್ರಕರ್ತ ಮುಖೇಶ್ ಚಂದ್ರಕರ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬಯಲು
ನನ್ನ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣ ನೋಡಿರಲಿಲ್ಲ ಎಂದ ವೈದ್ಯ
ಪತ್ರಕರ್ತ ಮುಖೇಶ್ ಚಂದ್ರಕರ್ (Photo credit: indiatoday.in)
ರಾಯ್ಪುರ : ಪತ್ರಕರ್ತ ಮುಖೇಶ್ ಚಂದ್ರಕರ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಬಹಿರಂಗವಾಗಿದ್ದು, ಕೊಲೆಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಮುಖೇಶ್ ಚಂದ್ರಕರ್ ಅವರ ಕೊಲೆಯ ಹಿಂದಿನ ರುವಾರಿ ಎಂದು ಹೇಳಲಾದ ಗುತ್ತಿಗೆದಾರ ಸುರೇಶ್ ಚಂದ್ರಕರ್ ನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಜನವರಿ 3ರಂದು ಘಟನೆ ಬೆಳಕಿಗೆ ಬಂದ ನಂತರ ಈತ ತಲೆಮರೆಸಿಕೊಂಡಿದ್ದ. ಆದರೆ, ಹೈದರಾಬಾದ್ ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಖೇಶ್ ಚಂದ್ರಕರ್(28) ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೃತ್ಯದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ಯಕೃತ್ತು ನಾಲ್ಕು ತುಂಡುಗಳಾಗಿದೆ, ಐದು ಪಕ್ಕೆಲುಬುಗಳು ಮುರಿದಿದೆ, ತಲೆಯಲ್ಲಿ 15 ಕಡೆ ಗಾಯಗಳಾಗಿದೆ. ಕತ್ತು ಮುರಿತಕ್ಕೊಳಗಾಗಿದೆ. ಹೃದಯವನ್ನು ಕಿತ್ತುಹಾಕಿರುವುದು ಕಂಡು ಬಂದಿದೆ. ತನ್ನ 12 ವರ್ಷದ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ನೋಡಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಬಸ್ತಾರ್ ನಲ್ಲಿ 120 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಯೋಜನೆಯಲ್ಲಿನ ಅವ್ಯವಹಾರವನ್ನು ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ ಬಹಿರಂಗಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮುಖೇಶ್ ಚಂದ್ರಕರ್ ನಾಪತ್ತೆಯಾಗಿದ್ದರು. ಈ ಕುರಿತು ತನಿಖೆ ನಡೆಸಿದಾಗ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮುಖೇಶ್ ಚಂದ್ರಕರ್ ಅವರ ಮೃತದೇಹ ಪತ್ತೆಯಾಗಿತ್ತು.