ಸಂಭಲ್ ಹಿಂಸಾಚಾರ ಪ್ರಕರಣ | ನ್ಯಾಯಾಂಗ ಆಯೋಗದ ಸದಸ್ಯರಿಂದ ಜಾಮಾ ಮಸೀದಿ ಪ್ರದೇಶ ಪರಿಶೀಲನೆ

PC : PTI
ಸಂಭಲ್ : ನ್ಯಾಯಾಂಗ ಆಯೋಗದ ಸದಸ್ಯರು ರವಿವಾರ ಬಿಗಿ ಭದ್ರತೆಯ ನಡುವೆ ಇಲ್ಲಿನ ಶಾಹಿ ಜಾಮಾ ಮಸೀದಿ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊಗಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶ ನೀಡಿದ ಬಳಿಕ ಸಂಭಲ್ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.
ನವೆಂಬರ್ 24ರಂದು ಹಿಂಸಾಚಾರಕ್ಕೆ ಸಾಕ್ಷಿಯಾದ ಸಂಭಲ್ಗೆ ಆಯೋಗದ ಮೂವರು ಸದಸ್ಯರ ಪೈಕಿ ಸಮಿತಿ ಮುಖ್ಯಸ್ಥ ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರಾ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅರವಿಂದ ಕುಮಾರ್ ಜೈನ್ ಭೇಟಿ ನೀಡಿದರು. ಈ ಸಂದರ್ಭ ಸಮಿತಿಯ ಇನ್ನೋರ್ವ ಸದಸ್ಯ ಮಾಜಿ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಜೊತೆಗಿರಲಿಲ್ಲ.
ಸಮಿತಿಯ ಸದಸ್ಯರು ಸಂಭಲ್ಗೆ ಬೆಳಗ್ಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿ ನಿವಾಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದರಿಂದ ಸದಸ್ಯರ ಜೊತೆಗೆ ಭದ್ರತಾ ಸಿಬ್ಬಂದಿ ಕೂಡ ಇದ್ದರು. ಆದರೆ, ಈ ಸಂದರ್ಭ ಸದಸ್ಯರು ಮಾದ್ಯಮದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಸಮಿತಿಯ ಸದಸ್ಯರ ಜೊತೆಗೆ ಮೊರದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್, ಡಿಐಜಿ ಮುನಿರಾಜ್ ಜಿ., ಸಂಭಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಹಾಗೂ ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಇದ್ದರು.
ಸಂಭಲ್ನಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತಿಯುತವಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.