ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ
ಜಸ್ಟಿಸ್ ಸಂಜೀವ್ ಖನ್ನಾ (Photo:X/@LiveLawIndia)
ಹೊಸದಿಲ್ಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಸೋಮವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಸಂಜೀವ್ ಖನ್ನಾ(64) ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ನವೆಂಬರ್ 10ರಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ.
ನಿರ್ಗಮಿತ ಸಿಜೆಐ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪ್ರಸ್ತಾಪಿಸಿದ್ದರು. ಅವರ ಪ್ರಸ್ತಾವನೆಯನ್ನು ಪರಿಶೀಲಿಸಿ ಸರಕಾರ ನೂತನ ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೇಮಕ ಮಾಡಿತ್ತು.
1960ರ ಮೇ.14ರಂದು ಜನಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 1983ರಲ್ಲಿ ದಿಲ್ಲಿ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು. ನ್ಯಾಯಮೂರ್ತಿ ಖನ್ನಾ ಅವರು 2005ರಲ್ಲಿ ದಿಲ್ಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಮತ್ತು 2006ರಲ್ಲಿ ಖಾಯಂ ನ್ಯಾಯಾಧೀಶರಾಗಿ ಅವರನ್ನು ನೇಮಕ ಮಾಡಲಾಗಿತ್ತು. 2019ರಲ್ಲಿ ನ್ಯಾಯಮೂರ್ತಿ ಖನ್ನಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.