ಡಿಎಂಕೆ ನಡುವಿನ ಒಪ್ಪಂದ ಫಲಪ್ರದ: ರಾಜ್ಯಸಭೆ ಪ್ರವೇಶಿಸಲು ಕಮಲ್ ಹಾಸನ್ ತಯಾರು

Photo credit: X/@Udhaystalin
ಚೆನ್ನೈ: ಡಿಎಂಕೆ ಪಕ್ಷವು ತನ್ನ ಕೋಟಾದಿಂದ ನಟ ಕಮಲ್ ಹಾಸನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿರುವುದರಿಂದ, ಅವರೀಗ ರಾಜ್ಯಸಭೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಪ್ರಕಟಣೆಯ ಬೆನ್ನಿಗೇ, ಇಂದು ಕಮಲ್ ಹಾಸನ್ ಅವರ ನಿವಾಸಕ್ಕೆ ಭೇಟಿ ನೀಡಿದ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಅವರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, “ಇಂದು ನಾವು ಮಕ್ಕಳ್ ನೀದಿ ಮೈಯ್ಯಂ ನಾಯಕರಾದ ಕಲಾಜ್ಞಾನಿ ಕಮಲ್ ಹಾಸನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆವು. ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ, ರಾಜಕೀಯ ಮತ್ತು ಕಲೆಯಂಥ ವಿವಿಧ ಕ್ಷೇತ್ರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡ ಅವರಿಗೆ ನನ್ನ ಪ್ರೀತಿ ಮತ್ತು ಕೃತಜ್ಞತೆಗಳು” ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ, ಬುಧವಾರದಂದು ಡಿಎಂಕೆಯ ಹಿರಿಯ ನಾಯಕ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ್ ಬಾಬು ಅವರು ಕಮಲ್ ಹಾಸನ್ ಅವರನ್ನು ಅಲ್ವಾರ್ ಪೇಟೆಯಲ್ಲಿರುವ ಅವರ ಕಚೇರಿಯಲ್ಲಿ ಖುದ್ದಾಗಿ ಭೇಟಿ ಮಾಡಿದ್ದರು.
ವರದಿಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿದ್ದ ಒಪ್ಪಂದದಂತೆ ಡಿಎಂಕೆಯು ಕಮಲ್ ಹಾಸನ್ ಅವರಿಗೆ ರಾಜ್ಯಸಭಾ ಸದಸ್ಯತ್ವದ ಭರವಸೆ ನೀಡಿತ್ತು. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ರ ಮಕ್ಕಳ್ ನೀದಿ ಮೈಯ್ಯಂ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಹಾಗೂ ತನ್ನ ಸಂಪೂರ್ಣ ಬೆಂಬಲವನ್ನು ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಘೋಷಿಸಿತ್ತು. ಇದೀಗ ತಾನು ನೀಡಿದ್ದ ಭರವಸೆಯಂತೆ ಡಿಎಂಕೆ ಪಕ್ಷವು ಕಮಲ್ ಹಾಸನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದೆ.
ಜೂನ್ 2025ರ ವೇಳೆಗೆ ಡಿಎಂಕೆ, ಎಐಎಡಿಎಂಕೆ ಹಾಗೂ ಪಿಎಂಕೆಯ ರಾಜ್ಯಸಭಾ ಸಂಸದರು ಸೇರಿದಂತೆ ಕನಿಷ್ಠ ಪಕ್ಷ ಒಟ್ಟು ಆರು ರಾಜ್ಯಸಭಾ ಸಂಸದರ ಅವಧಿ ಅಂತ್ಯಗೊಳ್ಳಲಿದೆ.
மக்கள் நீதி மய்யத்தின் தலைவர் - கலைஞானி @ikamalhaasan சாரை இன்று அவருடைய இல்லத்தில் மரியாதை நிமித்தமாக சந்தித்தோம். அன்போடு வரவேற்று அரசியல், கலை என பல்வேறு துறைகள் சார்ந்து கருத்துக்களை பரிமாறிக்கொண்ட கமல் சாருக்கு என் அன்பும், நன்றியும்.@maiamofficial pic.twitter.com/YdLqu4KZs4
— Udhay (@Udhaystalin) February 13, 2025