ಕಮಲ್ ನಾಥ್ ಎಲ್ಲೂ ಹೋಗುವುದಿಲ್ಲ: ವದಂತಿಗಳಿಗೆ ತೆರೆ ಎಳೆದ ಕಾಂಗ್ರೆಸ್
Photo:PTI
ಭೋಪಾಲ್: ಪಕ್ಷದ ಹಿರಿಯ ಮುಖಂಡ ಕಮಲ್ ನಾಥ್ ಅವರು ಪಕ್ಷ ತೊರೆಯುವ ಬಗೆಗಿನ ವದಂತಿಗಳಿಗೆ ತೆರೆ ಎಳೆದಿರುವ ಪಕ್ಷ, ಕಮಲ್ ನಾಥ್ ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ತಮ್ಮ ಐದು ದಿನಗಳ ಚಿಂದ್ವಾರಾ ಪ್ರವಾಸವನ್ನು ಮೊಟಕುಗೊಳಿಸಿ ದಿಢೀರನೇ ದೆಹಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಮಲ್ ನಾಥ್ ಹಾಗೂ ಅವರ ಮಗ ಸಂಸದ ನಕುಲ್ ನಾಥ್ ಬಿಜೆಪಿ ಸೇರುವ ಬಗ್ಗೆ ವದಂತಿ ದಟ್ಟವಾಗಿ ಹಬ್ಬಿತ್ತು. ಮಧ್ಯಪ್ರದೇಶದ ಮಾಜಿ ಸಿಎಂ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ಭಾನುವಾರ ಮಹತ್ವದ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿತ್ತು. ರಾಜಕೀಯ ವಲಯಗಳಲ್ಲಿ ಸುತ್ತಾಡುತ್ತಿರುವ ವಿವಿಧ ಸಿದ್ಧಾಂತಗಳಡಿ ವಿಶ್ಲೇಷಣೆಗಳು ಭೋಪಾಲ್ ನಿಂದ ದೆಹಲಿಯ ವರೆಗೂ ಹರಿದಾಡುತ್ತಿದ್ದು, ಮುಂದಿನ ನಡೆಯ ಬಗೆಗಿನ ಕುತೂಹಲ ಉಳಿದುಕೊಂಡಿತ್ತು.
ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಯವರು ಕರೆ ಮಾಡಿ ಕಮಲ್ ನಾಥ್ ಜತೆ ಮಾತುಕತೆ ನಡೆಸಿದ್ದು, ಬಲುದೊಡ್ಡ ಪಕ್ಷಾಂತರವನ್ನು ತಡೆಯಲು ಸರ್ವಪ್ರಯತ್ನ ನಡೆಸಿದ್ದಾರೆ. ಆದರೆ ಕಮಲ್ ನಾಥ್ ಮುಂದಿನ ನಡೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಎಂದು ತಿಳಿದು ಬಂದಿದೆ.
ಕಮಲ್ ನಾಥ್ ಅವರು ಪಕ್ಷ ತೊರೆಯುವ ಬಗೆಗಿನ ವದಂತಿಗಳು ತಪ್ಪುದಾರಿಗೆ ಎಳೆಯುವಂಥದ್ದು ಹಾಗೂ ಕಾಲ್ಪನಿಕ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಹೇಳಿದ್ದಾರೆ.