ಕಣ್ಣೂರು ವಿ.ವಿ. ಕುಲಪತಿಯ ಮರು ನೇಮಕ ರದ್ದುಗೊಳಿಸಿದ ಸುಪ್ರೀಂ
ಸುಪ್ರೀಂ ಕೋರ್ಟ್ | Photo : PTI
ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಗೋಪಿನಾಥ್ ರವೀಂದ್ರನ್ ಅವರನ್ನು ಮರು ನೇಮಕ ಮಾಡುವ ಕೇರಳ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿ ರವೀಂದ್ರನ್ ಅವರ ಮರು ನೇಮಕವನ್ನು ಎತ್ತಿ ಹಿಡಿದು ಏಕ ಸದಸ್ಯ ಪೀಠ ನೀಡಿದ ಆದೇಶದ ವಿರುದ್ಧದ ಮೇಲ್ಮನವಿಯನ್ನು ಕೇರಳ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಕಳೆದ ವರ್ಷ ಫೆಬ್ರವರಿ 23ರಂದು ತಳ್ಳಿ ಹಾಕಿತ್ತು.
ಉಚ್ಚ ನ್ಯಾಯಾಲಯ 2022 ಫೆಬ್ರವರಿ 23ರಂದು ನೀಡಿದ ವಿವಾದಾತ್ಮಕ ತೀರ್ಪು ಹಾಗೂ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿ ರವೀಂದ್ರನ್ ಅವರನ್ನು ಮರು ನೇಮಕಕ್ಕೆ ಹೊರಡಿಸಲಾದ 2021 ನವೆಂಬರ್ 23ರ ದಿನಾಂಕದ ಅಧಿಸೂಚನೆಯನ್ನು ತಳ್ಳಿ ಹಾಕಲಾಗಿದೆ ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿದೆ.
ಕಣ್ಣೂರು ಕುಲಪತಿ ಮರು ನೇಮಕಕ್ಕೆ ಸಿಎಂ ಒತ್ತಡ: ಕೇರಳ ರಾಜ್ಯಪಾಲ
ಕಣ್ಣೂರು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಗೋಪಿನಾಥ್ ರವೀಂದ್ರನ್ ಅವರನ್ನು ಮರು ನೇಮಕ ಮಾಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಗೆ ಒತ್ತಡ ಹೇರುತ್ತಿದ್ದಾರೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಗುರುವಾರ ಆರೋಪಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವೀಂದ್ರನ್ ಅವರನ್ನು ಮರು ನೇಮಕ ಮಾಡುವಂತೆ ಕೋರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರನ್ನು ಬಳಕೆ ಮಾಡಿಕೊಂಡಿದ್ದಾರೆ. ಆದುದರಿಂದ ಬಿಂದು ಅವರನ್ನು ದೂಷಿಸುವಂತಿಲ್ಲ ಎಂದರು.