ಕನ್ವರಿಯಾಗಳಿಂದ ಅಂಗವಿಕಲ ವ್ಯಕ್ತಿಯ ಮೇಲೆ ಹಲ್ಲೆ; ವಿಡಿಯೋ ವೈರಲ್
ಉತ್ತರ ಪ್ರದೇಶದಲ್ಲಿ ಕನ್ವರಿಯಾಗಳಿಂದ ಹಲ್ಲೆಯ ಮೂರು ಪ್ರಕರಣಗಳು ವರದಿ
Screengrab:X/@Benarasiyaa
ಲಕ್ನೋ: ಉತ್ತರ ಪ್ರದೇಶದ ಮುಝಫ್ಫರನಗರ ಜಿಲ್ಲೆಯಲ್ಲಿ ಕನ್ವರಿಯಾ ಯಾತ್ರಾರ್ಥಿಗಳ ಗುಂಪೊಂದು ಅಂಗವಿಕಲ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವ್ಯಕ್ತಿ ಕನ್ವರಿಯಾಗಳತ್ತ ಕೋಲೊಂದನ್ನು ಬೀಸಿದ ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆಯೆನ್ನಲಾಗಿದ್ದು ವೀಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ವೀಡಿಯೋದಲ್ಲಿ ಪೊಲೀಸರು ಗುಂಪನ್ನು ಚದುರಿಸಿ ಸಂತ್ರಸ್ತನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.
ಅದೇ ಜಿಲ್ಲೆಯಲ್ಲಿ ನಡೆದಿದೆಯೆನ್ನಲಾದ ಘಟನೆಯ ಇನ್ನೊಂದು ವೀಡಿಯೋ ಕೂಡ ಹರಿದಾಡುತ್ತಿದ್ದು ಈ ವೀಡಿಯೋದಲ್ಲೂ ಕನ್ವರಿಯಾಗಳು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವುದು ಕಾಣಿಸುತ್ತದೆ.
ಸಂತ್ರಸ್ತ ಡೆಹ್ರಾಡೂನ್ನ ಆಖಿಬ್ ಎಂಬವನಾಗಿದ್ದು ಆತ ತನ್ನ ಭಾವನನ್ನು ಮೀರತ್ಗೆ ಬಿಡಲು ಕಾರಿನಲ್ಲಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ.
ತನ್ನ ಮೇಲೆ ಹಲ್ಲೆ ನಡೆದಾಗ ಆಖಿಬ್ ರಕ್ಷಿಸಿಕೊಳ್ಳಲು ಆಹಾರ ಸ್ಟಾಲ್ ಒಂದರೊಳಗೆ ಹೋಗಿದ್ದು ಆ ಸ್ಟಾಲ್ನಲ್ಲೂ ಕನ್ವರಿಯಾಗಳು ದಾಂಧಲೆಗೈದು ಹಾನಿಯೆಸಗಿದ್ದಾರೆ ಎಂದು ವರದಿಯಾಗಿದೆ.
ಹರಿದ್ವಾರದ ಮಂಗ್ಲೌರ್ ಎಂಬಲ್ಲಿ ಬುಧವಾರ ನಡೆದ ಇನ್ನೊಂದು ಘಟನೆಯಲ್ಲಿ ಕನ್ವರಿಯಾಗಳು ಇ-ರಿಕ್ಷಾ ಚಾಲಕನ ಮೇಲೆ ಹಲ್ಲೆಗೈದು ಆತನ ವಾಹನಕ್ಕೆ ಹಾನಿಗೈದಿದ್ದಾರೆ. ಕನ್ವರ್ ಯಾತ್ರೆಯ ಮಾರ್ಗದಲ್ಲಿ ಇ-ರಿಕ್ಷಾ ಆಕಸ್ಮಿಕವಾಗಿ ಕನ್ವರಿಯಾನೊಬ್ಬನಿಗೆ ಢಿಕ್ಕಿ ಹೊಡೆದ ನಂತರ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.