ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಸುಪ್ರೀಂ ಕೋರ್ಟ್ ಗೆ ನೇಮಕ
ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ 3 ದಲಿತ ನ್ಯಾಯಾಧೀಶರು
ಪ್ರಸನ್ನ ಬಿ. ವರಾಳೆ(Photo: @barandbench \ X), ಕರ್ನಾಟಕ ಹೈಕೋರ್ಟ್ (PTI)
ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಕಳೆದ ವಾರ ಅವರಿಗೆ ಬಡ್ತಿ ನೀಡಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಎಂದು livelaw.in ವರದಿ ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ, ಹೈಕೋರ್ಟ್ ನ್ಯಾಯಾಧೀಶರಲ್ಲಿ ಪರಿಶಿಷ್ಟ ಜಾತಿ ನ್ಯಾಯಾಧೀಶರ ಪೈಕಿ ನ್ಯಾ. ವರಾಳೆ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಇಡೀ ದೇಶಾದ್ಯಂತ ಇರುವ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ ವರಾಳೆ ಏಕೈಕ ಪರಿಶಿಷ್ಟ ಜಾತಿಯ ಮುಖ್ಯ ನ್ಯಾಯಾಧೀಶರಾಗಿದ್ದಾರೆ ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಾಧೀಶರ ಕ್ರೋಡೀಕೃತ ಅಖಿಲ ಭಾರತ ಹಿರಿತನದಲ್ಲಿ ವರಾಳೆ ಆರನೆಯ ಕ್ರಮಾಂಕದಲ್ಲಿದ್ದಾರೆ. ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಹಿರಿತನದಲ್ಲಿ ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.
ಕಳೆದ ತಿಂಗಳು ನ್ಯಾ. ಎಸ್.ಕೆ.ಕೌಲ್ ನಿವೃತ್ತರಾಗಿ, ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರ ಹುದ್ದೆಯೊಂದು ಖಾಲಿಯಾಗಿದ್ದರಿಂದ ಈ ಶಿಫಾರಸನ್ನು ಮಾಡಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಯಿಯಂನಲ್ಲಿ ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿ.ಆರ್.ಗವಾಯಿ, ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಅನಿರುದ್ಧ್ ಬೋಸ್ ಇನ್ನಿತರ ಸದಸ್ಯರಾಗಿದ್ದರು.