ಕೇಜ್ರಿವಾಲ್ರನ್ನು ಸೋಲಿಸಿದ ಬಿಜೆಪಿ ನಾಯಕ ಈಗ ಸಿಎಂ ಹುದ್ದೆಗೆ ಅಗ್ರ ಅಭ್ಯರ್ಥಿ; ಯಾರು ಪರ್ವೇಶ್ ವರ್ಮಾ ?

ಪರ್ವೇಶ್ ಶರ್ಮಾ (PTI)
ಹೊಸದಿಲ್ಲಿ: ‘ಫೆ.8ರ ನಂತರ ಪಕ್ಷವು ನಿರ್ಧರಿಸಲಿದೆ. ಅವರು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದರೆ ನಾನು ಅದಕ್ಕೆ ಒಪ್ಪಿಕೊಳ್ಳುತ್ತೇನೆ’; ಜನವರಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಬಿಜೆಪಿಯ ಪರ್ವೇಶ್ ಸಾಹಿಬ್ಸಿಂಗ್ ವರ್ಮಾ(47) ತನ್ನ ಭವಿಷ್ಯದ ಬಗ್ಗೆ ಹೀಗೆ ನುಡಿದಿದ್ದರು.
ಮೂರು ಬಾರಿ ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಇಂದು ಹೊಸದಿಲ್ಲಿ ಕ್ಷೇತ್ರದಲ್ಲಿ ಪರಾಭವಗೊಳಿಸಿರುವ ವರ್ಮಾ ಉನ್ನತ ಹುದ್ದೆಗೆ ಏರುವ ಹೆಚ್ಚಿನ ಸಾಧ್ಯತೆಯಿದೆ.
ಹೊಸದಿಲ್ಲಿ 2013ರಲ್ಲಿ ಕೇಜ್ರಿವಾಲ್ ಅವರು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತರನ್ನು ಸೋಲಿಸಿ ಅವರ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದ್ದ ಕ್ಷೇತ್ರವಾಗಿದೆ. ದೀಕ್ಷಿತರ ಪುತ್ರ ಸಂದೀಪ್ ದೀಕ್ಷಿತ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಾದರೂ ಮೂರನೇ ಸ್ಥಾನದಲ್ಲಿದ್ದರು. ಹೊಸದಿಲ್ಲಿ ಕ್ಷೇತ್ರವು ಸಾಮಾನ್ಯವಾಗಿ ಆಡಳಿತ ಸರಕಾರದ ಹೆಚ್ಚುತ್ತಿರುವ ಅಥವಾ ಕುಸಿಯುತ್ತಿರುವ ಜನಪ್ರಿಯತೆಯ ಮಾನದಂಡವಾಗಿದೆ.
ಕೇಜ್ರಿವಾಲ್ ಈ ಕ್ಷೇತ್ರದಲ್ಲಿ 2015ರಲ್ಲಿ ಶೇ.64.14 ಮತ್ತು 2020ರಲ್ಲಿ ಶೇ.61.1 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು.
ಹೊಸದಿಲ್ಲಿ ಕ್ಷೇತ್ರದಲ್ಲಿ ಚುನಾವಣೆಯು ತೀವ್ರ ಹಣಾಹಣಿಗೆ ಸಾಕ್ಷಿಯಾಗಿತ್ತು. ಮತದಾರರ ಪಟ್ಟಿ ತಿರುಚುವಿಕೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಿಜೆಪಿಯಿಂದ ಉಚಿತ ಕೊಡುಗೆಗಳ ವಿತರಣೆ ಮತ್ತು ಮತದಾರರನ್ನು ದಮನಿಸಲಾಗುತ್ತಿದೆ ಎಂಬ ಆರೋಪಗಳನ್ನು ಆಪ್ ಮಾಡಿತ್ತು. ಯಮುನಾ ನದಿ ದಂಡೆಯನ್ನು ಸಾಬರಮತಿಯಲ್ಲಿದ್ದಂತೆ ಮಾಡುವುದು,ಕೊಳಗೇರಿ ನಿವಾಸಿಗಳಿಗೆ ಮನೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು, 50,000 ಸರಕಾರಿ ಉದ್ಯೋಗಗಳು, ಫ್ಲೈಓವರ್ಗಳ ನಿರ್ಮಾಣ ಮತ್ತು ಮಾಲಿನ್ಯಮುಕ್ತ ರಾಜಧಾನಿ ಸೇರಿದಂತೆ ಹಲವಾರು ಭರವಸೆಗಳನ್ನು ವರ್ಮಾ ನೀಡಿದ್ದರು.
ಪ್ರಚಾರದುದ್ದಕ್ಕೂ ಬೆಂಬಲಿಗರು ವರ್ಮಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದರು. ‘ದಿಲ್ಲಿ ಕಾ ಸಿಎಂ ಕೈಸಾ ಹೋ, ಪರ್ವೇಶ್ ವರ್ಮಾ ಜೈಸಾ ಹೋ’ ಎಂಬ ಘೋಷಣೆ ಅವರ ಪ್ರಚಾರದಲ್ಲಿ ಪ್ರತಿಧ್ವನಿಸುತ್ತಿತ್ತು.
ಎರಡು ಸಲ ಪಶ್ಚಿಮ ದಿಲ್ಲಿ ಸಂಸದ ಮತ್ತು ಒಂದು ಸಲ ಮೆಹ್ರೌಲಿ ಶಾಸಕರಾಗಿದ್ದ ವರ್ಮಾ ಕಳೆದ ಮೂರು ದಶಕಗಳಿಂದಲೂ ಬಿಜೆಪಿಯಲ್ಲಿದ್ದು,ಜನವರಿ ಮಧ್ಯದ ವೇಳೆಗೆ ತನ್ನ ಪ್ರಚಾರ ಅಭಯಾನವನ್ನು ಆರಂಭಿಸಿದ್ದರು. ಅದಕ್ಕೂ ವಾರಗಳ ಮುನ್ನ ಅವರು ನಿವಾಸಿಗಳ ಅಗತ್ಯಗಳನ್ನು ತಿಳಿದುಕೊಳ್ಳಲು ಹೊಸದಿಲ್ಲಿ ಕ್ಷೇತ್ರದಲ್ಲಿಯ ರೆಪಡಿಗಳಿಗೆ ಭೇಟಿ ನೀಡತೊಡಗಿದ್ದರು.
‘ಹಲವಾರು ರೆಪಡಿಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಇಲ್ಲ. ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಯಾರಿಗೆ ಶುದ್ಧ ನೀರು ಮತ್ತು ಶೂನ್ಯ ವಿದ್ಯುತ್ ಬಿಲ್ಗಳು ಸಿಗುತ್ತಿವೆಯೋ ಅವರು ಕೇಜ್ರಿವಾಲ್ಗೆ ಮತ ನೀಡಿ,ಯಾರಿಗೆ ಸಿಗುತ್ತಿಲ್ಲವೋ ಅವರು ಬಿಜೆಪಿಗೆ ಮತ ನೀಡಿ ’ ಎಂದು ವರ್ಮಾ ಹಲವಾರು ಸಂದರ್ಭಗಳಲ್ಲಿ ಹೇಳಿದ್ದರು.
ದಿಲ್ಲಿಯಲ್ಲಿಯ ಮೂರು ಲಕ್ಷ ರೆಪಡಿಗಳ ಪೈಕಿ ಶೇ.20ರಷ್ಟು ಹೊಸದಿಲ್ಲಿ ಮತ್ತು ಇತರ ಒಂಭತ್ತು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹೊಸದಲ್ಲಿ ಲೋಕಸಭಾ ಕ್ಷೇತ್ರದಲ್ಲಿವೆ.
ಡಿಸೆಂಬರ್ನಲ್ಲಿ ಆಪ್ ಮತಗಳ ಖರೀದಿಗಾಗಿ ವರ್ಮಾ ಮಹಿಳೆಯರಿಗೆ 1,100 ರೂ.ಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ವರ್ಮಾ,ತಾನು ತನ್ನ ತಂದೆಯ ಎನ್ಜಿಒ ಮೂಲಕ ಈ ಮಹಿಳೆಯರಿಗೆ ನೆರವಾಗುತ್ತಿದ್ದೇನೆ ಎಂದು ಹೇಳಿದ್ದರು.