GST ಅಧಿಕಾರಿಗಳ ರಹಸ್ಯ ಕಾರ್ಯಾಚರಣೆ | ಲೆಕ್ಕವಿಲ್ಲದ 120 ಕೆಜಿ ಚಿನ್ನ ವಶ
PC : PTI
ತ್ರಿಶೂರ್ : ಚಿನ್ನದ ವ್ಯಾಪಾರಕ್ಕೆ ಹೆಸರಾದ ತ್ರಿಶೂರ್ ನಲ್ಲಿನ ಚಿನ್ನದ ಆಭರಣ ತಯಾರಿಕಾ ಘಟಕಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ಮಹತ್ವದ ಕಾರ್ಯಾಚರಣೆಯಲ್ಲಿ ಕೇರಳ ಸರಕು ಮತ್ತು ಸೇವಾ ತೆರಿಗೆ (GST) ಘಟಕವು 120 ಕೆಜಿಯಷ್ಟು ಲೆಕ್ಕಿವಿಡದ ಚಿನ್ನವನ್ನು ವಶಪಡಿಸಿಕೊಂಡಿದೆ.
ರಹಸ್ಯವಾಗಿ ನಡೆದ ಈ ಕಾರ್ಯಾಚರಣೆಯನ್ನು ಕೇರಳ ರಾಜ್ಯದಲ್ಲಿ ಈವರೆಗೆ ನಡೆದಿರುವ ಅತ್ಯಂತ ಬೃಹತ್ ಕಾರ್ಯಾಚರಣೆ ಎಂದು ಹೇಳಲಾಗಿದೆ.
ಬುಧವಾರ ಪ್ರಾರಂಭಗೊಂಡ ಈ ಕಾರ್ಯಾಚರಣೆಯು ಗುರುವಾರವೂ ಮುಂದುವರಿದಿದೆ. 700 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕೇಂದ್ರ ಕೇರಳ ಜಿಲ್ಲೆಯಾದ್ಯಂತ ಇರುವ ತಯಾರಿಕಾ ಘಟಕಗಳು ಹಾಗೂ ಆಭರಣ ಮಾರಾಟ ಮಳಿಗೆಗಳು ಸೇರಿದಂತೆ ಒಟ್ಟು 78 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಚಿನ್ನ ವಶಪಡಿಸಿಕೊಳ್ಳುವುದರೊಂದಿಗೆ, ಬಿಲ್ಲಿಂಗ್ ಹಾಗೂ ತೆರಿಗೆ ವಿಧಿಸುವುದರಲ್ಲಿ ಗಮನಾರ್ಹ ಅಕ್ರಮಗಳು ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.
GST ವಿಶೇಷ ಆಯುಕ್ತ ಅಬ್ರಹಾಂ ರೆನ್ ಎಸ್. ಉಸ್ತುವಾರಿಯಲ್ಲಿ ಈ ವ್ಯಾಪಕ ದಾಳಿಗಳು ನಡೆದಿವೆ.
ಈ ಕಾರ್ಯಾಚರಣೆಯ ಗೌಪ್ಯತೆಯನ್ನು ಕಾಪಾಡಲು ರಾಜ್ಯಾದ್ಯಂತ ಇರುವ ಅಧಿಕಾರಿಗಳನ್ನು ತರಬೇತಿ ಕಾರ್ಯಕ್ರಮದ ಸೋಗಿನಲ್ಲಿ ತ್ರಿಶೂರಿಗೆ ಕರೆಸಿಕೊಳ್ಳಲಾಗಿತ್ತು ಹಾಗೂ ಅವರನ್ನೆಲ್ಲ ವಿವಿಧ ಸ್ಥಳಗಳಿಗೆ ‘ಅಧ್ಯಯನ ಪ್ರವಾಸ’ ಎಂಬ ಬ್ಯಾನರ್ ಹೊಂದಿರುವ ಬಸ್ ಗಳಲ್ಲಿ ರವಾನಿಸಲಾಗಿತ್ತು ಎಂದೂ ವರದಿಯಾಗಿದೆ.
ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಜ್ಯ GST ಗುಪ್ತಚರ ವಿಭಾಗದ ಉಪ ಆಯುಕ್ತ ದಿನೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.