ಕೇರಳ: ರಾಜಕೀಯ ಬಿರುಗಾಳಿಗೆ ಕಾರಣವಾದ ದೇವಸ್ಥಾನದ ಉತ್ಸವದಲ್ಲಿನ ಡಿವೈಎಫ್ಐ ಧ್ವಜಗಳು, ಸಿಪಿಎಂ ಗೀತೆಗಳು

PC : X
ತಿರುವನಂತಪುರ: ಕೊಲ್ಲಂ ಜಿಲ್ಲೆಯ ದೇವಸ್ಥಾನವೊಂದರ ಉತ್ಸವದಲ್ಲಿ ಸಿಪಿಎಮ್ನ ಯುವಘಟಕ ಡಿವೈಎಫ್ಐ ಧ್ವಜಗಳ ಪ್ರದರ್ಶನ ಮತ್ತು ಆಡಳಿತ ಪಕ್ಷವನ್ನು ವೈಭವೀಕರಿಸಿದ ಹಾಡುಗಳ ಬಳಿಕ ಕೇರಳದಲ್ಲಿ ಭಾರೀ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ.
ಈ ಘಟನೆಯ ಕುರಿತು ಜಾಗ್ರತ ತನಿಖೆಗೆ ಆದೇಶಿಸಲಾಗಿದ್ದು,ವರದಿಯು ಕೈಸೇರಿದ ಬಳಿಕ ಹೊಣೆಗಾರರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ ತಿಳಿಸಿದರು.
ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ವಿ.ಡಿ.ಸತೀಶನ್, ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿಸಲು ಮತ್ತು ಬಿಜೆಪಿಗೆ ಅವಕಾಶವನ್ನು ಕಲ್ಪಿಸಲು ಅವರು ಬಯಸಿದ್ದಾರೆಯೇ ಎಂದು ಪ್ರಶ್ನಿಸಿದರು.
‘ಈ ವ್ಯಕ್ತಿಗೆ ಹಾಡಲು ಬೇರೆ ಸ್ಥಳವಿರಲಿಲ್ಲವೇ? ಪುಷ್ಪನ್ ನಿಮಗೆ ಗೊತ್ತೇ ಎಂದು ಭಕ್ತರನ್ನು ಏಕೆ ಕೇಳಲಾಗಿತ್ತು? ಇದು ನಾಚಿಕೆಯಿಲ್ಲದ ಪಕ್ಷ. ಸಂಘರ್ಷವನ್ನು ಸೃಷ್ಟಿಸುವುದು ಮತ್ತು ಬಿಜೆಪಿಗೆ ಅವಕಾಶ ಕಲ್ಪಿಸುವುದು ಅವರ ಗುರಿಯಾಗಿದೆಯೇ? ಸಮಸ್ಯೆ ಎಂದರೆ ಅಧಿಕಾರದ ಧಿಮಾಕು ಅವರ ತಲೆಗೇರಿದೆ ’ಎಂದು ಅವರು ಹೇಳಿದರು.
ಮಾ.10ರಂದು ಕಡಕ್ಕಲ್ ದೇವಿ ದೇವಸ್ಥಾನದಲ್ಲಿ ತಿರುವತಿರ ಉತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಮಾಧ್ಯಮ ವರದಿಗಳ ಪ್ರಕಾರ ಎಡರಂಗ ಪರ ಗೀತೆಗಳನ್ನು ಹಾಡಲಾಗಿತ್ತು ಮತ್ತು ವೇದಿಕೆಯಲ್ಲಿನ ಎಲ್ಇಡಿ ಸ್ಕ್ರೀನ್ನಲ್ಲಿ ಸಿಪಿಎಂ ಮತ್ತು ಡಿವೈಎಫ್ಐ ಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಸಭಿಕರ ಪೈಕಿ ಕೆಲವರು ‘ಇಂಕ್ವಿಲಾಬ್ ಜಿಂದಾಬಾದ್’ಘೋಷಣೆಗಳನ್ನೂ ಕೂಗಿದ್ದರು.
ನ್ಯಾಯಾಲಯಗಳು ದೇವಸ್ಥಾನಗಳ ಆವರಣಗಳಲ್ಲಿ ರಾಜಕೀಯ ಧ್ವಜಗಳು ಮತ್ತು ಚಿಹ್ನೆಗಳ ಪ್ರದರ್ಶನವನ್ನು ನಿಷೇಧಿಸಿವೆ. ಈ ಬಗ್ಗೆ ಮಂಡಳಿಯು ತನ್ನ ನಿಯಂತ್ರಣದಲ್ಲಿರುವ ಎಲ್ಲ ದೇವಸ್ಥಾನಗಳಿಗೆ ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಿದೆ ಎಂದು ಹೇಳಿದ ಪ್ರಶಾಂತ,ಮಂಡಳಿಯು ಮಾ.19ರಂದು ತಿರುವನಂತಪುರದಲ್ಲಿ ನಡೆಯಲಿರುವ ತನ್ನ ಸಭೆಯಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಿದೆ ಎಂದು ತಿಳಿಸಿದರು.