ಕೇರಳ | ಫೋರ್ಟ್ ಕೊಚ್ಚಿಯಲ್ಲಿ ಫೆಲೆಸ್ತೀನ್ ಪರ ವರ್ಣಚಿತ್ರವನ್ನು ಹರಿದು ಹಾಕಿದ ಆಸ್ಟ್ರಿಯಾ ಪ್ರವಾಸಿಗರು
PC : X \ @MaktoobMedia
ಕೊಚ್ಚಿ: ಲಜ್ಜೆಗೇಡಿ ಧ್ವಂಸ ಕೃತ್ಯವೊಂದರಲ್ಲಿ, ಮಂಗಳವಾರ ಕೇರಳದ ಫೋರ್ಟ್ ಕೊಚ್ಚಿಯಲ್ಲಿ ಹಾಕಿದ್ದ ಫೆಲೆಸ್ತೀನ್ ಪರ ವರ್ಣಚಿತ್ರವನ್ನು ಇಬ್ಬರು ಆಸ್ಟ್ರಿಯಾ ಪ್ರವಾಸಿಗರು ಹರಿದು ಹಾಕಿದ್ದಾರೆ. ಆ ವರ್ಣಚಿತ್ರದಲ್ಲಿ “ಮೌನವೇ ಹಿಂಸಾಚಾರ, ಮಾನವತೆಯ ಪರ ಎದ್ದು ನಿಲ್ಲಿ” ಎಂದು ಬರೆಯಲಾಗಿತ್ತು. ಈ ವರ್ಣಚಿತ್ರವನ್ನು ಡಿಸೆಂಬರ್ 2023ರಲ್ಲಿ ನಡೆದಿದ್ದ ಕೊಚ್ಚಿನ್ ಹಬ್ಬದಲ್ಲಿ ನಿಲ್ಲಿಸಲಾಗಿತ್ತು. ಆ ವರ್ಣಚಿತ್ರವನ್ನು ಯಹೂದಿಗಳ ಪರವಾಗಿ ಹರಿದು ಹಾಕಿದೆವು ಎಂದು ವಾದಿಸಿದ ಮಹಿಳೆಯೊಬ್ಬರೊಂದಿಗೆ ಆ ಕೃತ್ಯವನ್ನು ನೋಡಿದ ಯುವಕನೊಬ್ಬ ವಾಗ್ವಾದ ನಡೆಸಿರುವುದು ವೀಡಿಯೊವೊಂದರಲ್ಲಿ ಸೆರೆಯಾಗಿದೆ.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾದ ಪ್ರದೇಶ ಕಾರ್ಯದರ್ಶಿ ಮುಹಮ್ಮದ್ ಅಝೀಂ ಅವರ ದೂರನ್ನು ಆಧರಿಸಿ, ಕೇರಳ ಪೊಲೀಸರು ಆಸ್ಟ್ರಿಯಾ ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯ ನಡೆದ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆ ವರ್ಣಚಿತ್ರದ ಫೋಟೊ ತೆಗೆಯುತ್ತಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆ ಇಬ್ಬರೂ ಮಹಿಳೆಯರು ವರ್ಣಚಿತ್ರವನ್ನು ಹರಿದು ಹಾಕಿರುವುದು ಸೆರೆಯಾಗಿದೆ. ಈ ವೀಡಿಯೊ ತುಣುಕಿನಲ್ಲಿ ಓರ್ವ ಮಹಿಳೆ ವರ್ಣಚಿತ್ರವನ್ನು ಹರಿದು ಹಾಕುತ್ತಿದ್ದರೆ, ಮತ್ತೊಬ್ಬ ಮಹಿಳೆಯು ಆ ಕೃತ್ಯವನ್ನು ತನ್ನ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ರಸ್ತೆಯ ಬದಿ ನಿಂತಿದ್ದ ಓರ್ವ ಯುವಕ ಈ ಕೃತ್ಯವನ್ನು ಪ್ರಶ್ನಿಸಿದಾಗ, ರಸ್ತೆಯಲ್ಲಿ ಸಾಗಿ ಹೋಗುತ್ತಿದ್ದ ಇನ್ನೂ ಕೆಲವರ ಗುಂಪು ಆತನೊಂದಿಗೆ ಸೇರಿಕೊಂಡಿರುವುದು ವೀಡಿಯೊ ತುಣುಕಿನಲ್ಲಿ ಸೆರೆಯಾಗಿದೆ. ಈ ಸಂಘರ್ಷದ ವೀಡಿಯೊ ಸಾಮಾಜಿಕ ಮಾಧ್ಯಯಮಗಳಲ್ಲಿ ವೈರಲ್ ಆಗಿದ್ದು, “ನೀನು ತಪ್ಪು ಪ್ರಚಾರ ಹಾಗೂ ಸುಳ್ಳನ್ನು ಹರಡುತ್ತಿದ್ದೀಯ” ಎಂದು ಓರ್ವ ಪ್ರವಾಸಿಯು ವ್ಯಕ್ತಿಯೊಬ್ಬನೊಂದಿಗೆ ವಾಗ್ವಾದ ನಡೆಸುತ್ತಿರುವುದೂ ಅದರಲ್ಲಿ ಸೆರೆಯಾಗಿದೆ. “ನಾನಿದನ್ನು ಯಹೂದಿ ಜನರಿಗಾಗಿ ಮಾಡಿದೆ” ಎಂದೂ ಆ ಮಹಿಳೆ ಹೇಳುತ್ತಿರುವುದನ್ನು ಆ ವೀಡಿಯೊದಲ್ಲಿ ಕೇಳಬಹುದಾಗಿದೆ.
ಈ ಸಂಬಂಧ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾದ ಪ್ರದೇಶ ಕಾರ್ಯದರ್ಶಿ ಮುಹಮ್ಮದ್ ಅಝೀಂ ಅವರ ದೂರನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದ್ದರೂ, ಅದರಲ್ಲಿ ಯಾರದೇ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಕೊಚ್ಚಿ ಪೊಲೀಸರು ಪ್ರವಾಸಿ ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಮಾರಕವಾಗುವಂತೆ ಅಥವಾ ಬೇಕೆಂತಲೇ ಏನನ್ನಾದರೂ ಕಾನೂನು ಬಾಹಿರವಾಗಿ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.