ಹಿರಿಯ ಅಧಿಕಾರಿಗಳ ವಿರುದ್ಧ ಸ್ವಪಕ್ಷದ ಶಾಸಕರಿಂದ ಗಂಭೀರ ಆರೋಪ: ಉನ್ನತ ತನಿಖೆಗೆ ಆದೇಶಿಸಿದ ಕೇರಳ ಸಿಎಂ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (PTI)
ಕೇರಳ: ರಾಜ್ಯದ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಎಲ್ಡಿಎಫ್ ಶಾಸಕ ಪಿ.ವಿ. ಅನ್ವರ್ ಮಾಡಿರುವ ಗಂಭೀರ ಆರೋಪಗಳ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.
ಪೊಲೀಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಪಿಣರಾಯ್ ವಿಜಯನ್, ಅನ್ವರ್ ಅವರ ಆರೋಪಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ, ಎಲ್ಲಾ ಆರೋಪಗಳ ತನಿಖೆಯನ್ನು ಉನ್ನತ ಶ್ರೇಣಿಯ ಅಧಿಕಾರಿಗೆ ವಹಿಸಲಾಗುವುದು, ಪೊಲೀಸ್ ಪಡೆಗಳಲ್ಲಿನ ಯಾವುದೇ ಶಿಸ್ತಿನ ಉಲ್ಲಂಘನೆಯನ್ನು ಯಾವುದೇ ಸಹಿಸಲಾಗುವುದಿಲ್ಲ, ಸಮಸ್ಯೆಗಳ ಮೂಲವನ್ನು ಲೆಕ್ಕಿಸದೆ ಸರ್ಕಾರವು ಅವುಗಳನ್ನು ಗಂಭೀರವಾಗಿ ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.
ನಿಲಂಬೂರ್ ಶಾಸಕ ಅನ್ವರ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಪಿ ಶಶಿ ಮತ್ತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಜಿತ್ ಕುಮಾರ್ ವಿಶ್ವಾಸವನ್ನು ಉಲ್ಲಂಘಿಸಿದ್ದಾರೆ ಮತ್ತು ಪ್ರಾಮಾಣಿಕವಾಗಿ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಒಂದು ದಿನದ ನಂತರ ವಿಜಯನ್ ಅವರ ಈ ಮಹತ್ವದ ಹೇಳಿಕೆ ಹೊರ ಬಿದ್ದಿದೆ.
ಸಚಿವರ ಫೋನ್ ಸಂಭಾಷಣೆಗಳ ಕದ್ದಾಲಿಕೆ, ಚಿನ್ನ ಕಳ್ಳಸಾಗಣೆದಾರರ ಜೊತೆ ಸಂಪರ್ಕ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎಡಿಜಿಪಿ ಅಜಿತ್ ಕುಮಾರ್ ವಿರುದ್ಧ ಅನ್ವರ್ ಆರೋಪಿಸಿದ್ದರು. ಇದಲ್ಲದೆ ಪತ್ತನಂತಿಟ್ಟ ಎಸ್ಪಿ ಸುಜಿತ್ ದಾಸ್ ವಿರುದ್ಧವೂ ಅವರು ಗಂಭೀರ ಆರೋಪ ಮಾಡಿದ್ದಾರೆ. ಉನ್ನತ ಶ್ರೇಣಿಯ ಅಧಿಕಾರಿಯ ವಿರುದ್ಧ ಆಡಳಿತರೂಡ ಎಡ ಪಕ್ಷದ ಶಾಸಕರೇ ಮಾಡಿರುವ ಆರೋಪವನ್ನು ವಿರೋಧ ಪಕ್ಷಗಳು ದೊಡ್ಡ ಅಸ್ತ್ರವನ್ನು ಮಾಡಿಕೊಂಡಿದೆ. ಸಿಎಂ ಪಿಣರಾಯ್ ವಿಜಯನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಕಾಂಗ್ರೆಸ್, ಅನ್ವರ್ ಅವರ ಆರೋಪಗಳನ್ನು ಅತ್ಯಂತ ಗಂಭೀರ ಮತ್ತು ಆತಂಕಕಾರಿ ಎಂದು ಹೇಳಿದ್ದು, ಸಿಎಂ ಕಚೇರಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆಯನ್ನು ನಡೆಸುವಂತೆ ಆಗ್ರಹಿಸಿದೆ. ಇದಲ್ಲದೆ ಸ್ವಪಕ್ಷದ ಶಾಸಕರ ಆರೋಪಗಳಿಗೆ ಉತ್ತರ ನೀಡುವಂತೆ ಸಿಎಂಗೆ ಬಿಜೆಪಿ ಆಗ್ರಹಿಸಿದೆ.