ಕೇರಳ ಪೊಲೀಸ್ ಕಮಾಂಡೊ ಅತ್ಮಹತ್ಯೆ: ಭುಗಿಲೆದ್ದ ವಿವಾದ
ಉನ್ನತ ಪೊಲೀಸ್ ಅಧಿಕಾರಿಗಳ ಕಿರುಕುಳ: ಆರೋಪ
ವಿನೀತ್ (Photo: thenewsminute.com)
ವಯನಾಡ್: ಕೇರಳ ಪೊಲೀಸ್ ಕಮಾಂಡೊ ಒಬ್ಬರು ತಮ್ಮ ಸರ್ವೀಸ್ ಪಿಸ್ತೂಲಿನಿಂದಲೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕೇರಳದಲ್ಲಿ ಭಯೋತ್ಪಾದಕ ಮತ್ತು ಮಾವೋವಾದಿ ನಿಗ್ರಹ ಕಾರ್ಯಾಚರಣೆ ನಡೆಸುವ ಎಸ್ಒಜಿಯಲ್ಲಿ ಕಮಾಂಡೊ ಆಗಿದ್ದ 36 ವರ್ಷದ ವಿನೀತ್ ಎಂದು ಗುರುತಿಸಲಾಗಿದೆ. ಮಲಪ್ಪುರಂನ ಅರೀಕೋಡ್ ಬಳಿಯಿರುವ ಮಲಬಾರ್ ವಿಶೇಷ ಪೊಲೀಸ್ ಶಿಬಿರಕ್ಕೆ ಸಂಬಂಧಿಸಿದ ವಯನಾಡ್ ಜಿಲ್ಲೆಯ ವೆಂಗಪಲ್ಲಿ ಗ್ರಾನದ ನಿವಾಸಿಯಾದ ವಿನೀತ್, ರವಿವಾರ ರಾತ್ರಿ ಪೊಲೀಸ್ ಶಿಬಿರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೇರಳ ಗೃಹ ಇಲಾಖೆಯ ದತ್ತಾಂಶದ ಪ್ರಕಾರ, 2016ರಿಂದ 2024ರ ಈ ತಿಂಗಳವರೆಗೆ ರಾಜ್ಯದ ಒಟ್ಟು 138 ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆಗೈದು ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಟಿ.ಸಿದ್ದೀಕಿ, ಉನ್ನತ ಪೊಲೀಸ್ ಅಧಿಕಾರಿಗಳ ಕಿರುಕುಳ ತಾಳಲಾರದೆ ವಿನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಮೃತ ಪೊಲೀಸ್ ಕಮಾಂಡೊರ ವಾಟ್ಸ್ ಆ್ಯಪ್ ಚಾಟ್ ಅನ್ನು ಉಲ್ಲೇಖಿಸಿದ ಅವರು, ನನ್ನ ಪತ್ನಿ ಗರ್ಭಿಣಿಯಾಗಿರುವುದರಿಂದ ನನಗೆ ರಜೆ ಬೇಕು ಎಂದು ವಿನೀತ್ ಮನವಿ ಮಾಡಿದ್ದು, ಆತನ ಮನವಿಯನ್ನು ಉನ್ನತ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ವಯನಾಡ್ನ ಕಲ್ಪೆಟ್ಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದೀಕಿ ದೂರಿದ್ದಾರೆ.
ಈ ನಡುವೆ, ತನ್ನ ತರಬೇತಿಯ ಭಾಗವಾಗಿ ನಡೆದಿದ್ದ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ವಿಫಲಗೊಂಡಿದ್ದರಿಂದ ವಿನೀತ್ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರು ಎಂದು ಆತನ ನಿಕಟ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.