ಕೇರಳ ಸ್ಫೋಟದ ಕುರಿತು ಪ್ರಚೋದನಕಾರಿ ಹೇಳಿಕೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು
Photo credit: PTI
ತಿರುವನಂತಪುರಂ: ಕೇರಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅವರ ಹೇಳಿಕೆಯು ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವಂತಿತ್ತು ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ ಹಾಗೂ ನಿವಾಸದ ನೆಲೆಯಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವುದು), ಸೆಕ್ಷನ್ 120 (o) (ಉಪದ್ರವ ಸೃಷ್ಟಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ) ಅನ್ವಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ ಎಂದು ಕೊಚ್ಚಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತ್ರಿವಳಿ ಸ್ಫೋಟದ ನಂತರ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಸ್ಫೋಟದ ಹೊಣೆಯನ್ನು ಹೊತ್ತುಕೊಂಡು ತ್ರಿಶೂರ್ ಪೊಲೀಸರೆದುರು ಶರಣಾಗಿದ್ದ.