ಕೇರಳ: 4,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ನರೇಂದ್ರ ಮೋದಿ | Photo: PTI
ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೇರಳದ ಕೊಚ್ಚಿಯಲ್ಲಿ 4,000 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಪ್ರಧಾನಮಂತ್ರಿಗಳು ಉದ್ಘಾಟಿಸಿದ ಮೂರು ಮೂಲಸೌಕರ್ಯ ಯೋಜನೆಗಳಲ್ಲಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಹೊಸ ಡ್ರೈ ಡಾಕ್, ಇಂಟರ್ ನ್ಯಾಶನಲ್ ಶಿಪ್ ರಿಪೇರಿ ಫೆಸಿಲಿಟಿ (ISRF) ಮತ್ತು ಕೊಚ್ಚಿಯ ಪುದುವೈಪಿನ್ ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ಎಲ್ಪಿಜಿ ಆಮದು ಟರ್ಮಿನಲ್ ಸೇರಿವೆ.
ಕೇರಳದಲ್ಲಿ ಆರಂಭಿಸಲಾದ ಹೊಸ ಮೂಲಸೌಕರ್ಯ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿಗಳು, ಕೊಚ್ಚಿಯಂತಹ ಕರಾವಳಿ ನಗರಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಕೊಚ್ಚಿಯನ್ನು ದೇಶಕ್ಕೆ ‘ಹಡಗು ನಿರ್ಮಾಣ ಕೇಂದ್ರ’ವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಲು, ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಬಂದರುಗಳ ಸಂಪರ್ಕವನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಭಾರತವು ಅಂತರ್ರಾಷ್ಟ್ರೀಯ ವ್ಯಾಪಾರದ ಕೇಂದ್ರವಾಗುತ್ತಿರುವ ಈ ಸಮಯದಲ್ಲಿ, ನಾವು ನಮ್ಮ ಸಾಗರ ಶಕ್ತಿಯನ್ನು ಹೆಚ್ಚಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಕೊಚ್ಚಿಯ ಅಭಿವೃದ್ಧಿಯನ್ನು ನಾವು ಉದಾಹರಣೆಯಾಗಿ ನೋಡುತ್ತೇವೆ ಎಂದು ಮೋದಿ ಹೇಳಿದರು.
ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಕೊಚ್ಚಿ ಬಂದರಿನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಹಡಗು ನಿರ್ಮಾಣ, ದುರಸ್ತಿ ಮತ್ತು ಎಲ್ಪಿಜಿ ಟರ್ಮಿನಲ್ನೊಂದಿಗೆ ಕೊಚ್ಚಿ ದೇಶದಲ್ಲೇ ಅತಿ ದೊಡ್ಡ ಡ್ರೈ ಡಾಕ್ ಆಗಿ ನಿಂತಿದೆ ಎಂದು ಹೇಳಿದರು.