ಖಾಲಿಸ್ತಾನಿ ಪ್ರತ್ಯೇಕತಾವಾದಿ ಪನ್ನೂನ್ ನಿಂದ ಮಹಾ ಕುಂಭಮೇಳಕ್ಕೆ ಬೆದರಿಕೆ
ಸಮುದಾಯಗಳನ್ನು ವಿಭಜಿಸುವ ತಂತ್ರ ಎಂದ ಅಖಾಡ ಪರಿಷತ್
ಗುರುಪತ್ವಂತ್ ಸಿಂಗ್ ಪನ್ನೂನ್ | Photo : Reuters
ಪ್ರಯಾಗ್ ರಾಜ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ವೀಡಿಯೊ ಸಂದೇಶದ ಮೂಲಕ ಬೆದರಿಕೆ ಒಡ್ಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಅಖಾಡ ಪರಿಷತ್, ಇದು ಸಮುದಾಯಗಳನ್ನು ವಿಭಜಿಸುವ ತಂತ್ರ ಎಂದು ವಾಗ್ದಾಳಿ ನಡೆಸಿದೆ.
ಸೋಮವಾರ ಫಿಲಿಬೀತ್ ನಲ್ಲಿ ಉತ್ತರ ಪ್ರದೇಶ ಪೊಲೀಸರು ಹಾಗೂ ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಖಾಲಿಸ್ತಾನಿ ಝಿಂದಾಬಾದ್ ಫೋರ್ಸ್ ನ ಭಯೋತ್ಪಾದಕರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದ ನಂತರ, ಗುರುಪತ್ವಂತ್ ಸಿಂಗ್ ಪನ್ನೂನ್ ಈ ಬೆದರಿಕೆ ವೀಡಿಯೊವನ್ನು ಬಿಡುಗಡೆ ಮಾಡಿದ್ದಾನೆ. ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ) ಹಾಗೂ ಫೆಬ್ರವರಿ 3 (ಬಸಂತ್ ಪಂಚಮಿ) ರಂದು ನಡೆಯಲಿರುವ ಮಹಾ ಕುಂಭಮೇಳಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿರುವ ಪನ್ನೂನ್ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪನ್ನೂನ್, ನಿಷೇಧಿತ ಸಿಖ್ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ನ ಮುಖ್ಯಸ್ಥನಾಗಿದ್ದು, ಈ ಸಂಘಟನೆಯನ್ನು ಭಾರತ ಸರಕಾರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಈ ಸಂಬಂಧ ಮಹಾಕುಂಭ್ ನಗರ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷ ಮಹಂತ ರವೀಂದ್ರ ಪುರಿ, “ಪನ್ನೂನ್ ಎಂಬ ಈ ವ್ಯಕ್ತಿ ಮಹಾ ಕುಂಭಮೇಳಕ್ಕೆ ಪ್ರವೇಶಿಸುವ ಧೈರ್ಯ ತೋರಿದರೆ, ಆತನನ್ನು ಬಡಿದು, ಹೊರಗಟ್ಟಲಾಗುವುದು. ನಾವು ಇಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಮಾಘ ಮೇಳವಾಗಿದ್ದು, ಸಿಖ್ಖರು ಹಾಗೂ ಹಿಂದೂಗಳು ಒಗ್ಗಟ್ಟಾಗಿದ್ದಾರೆ. ಸಮುದಾಯಗಳ ವಿಭಜನೆಗೆ ಪ್ರಚೋದನೆ ನೀಡುವ ಪನ್ನೂನ್ ಪ್ರಯತ್ನ ಅನಗತ್ಯವಾಗಿತ್ತು. ನಮ್ಮ ಸನಾತನ ಪರಂಪರೆಯನ್ನು ಜೀವಂತವಾಗುಳಿಸಿರುವುದೇ ಸಿಖ್ ಸಮುದಾಯವಾಗಿದೆ. ಅವರು ಸನಾತನ ಧರ್ಮಕ್ಕೆ ರಕ್ಷಣೆ ಒದಗಿಸಿದ್ದಾರೆ” ಎಂದೂ ಅವರು ಹೇಳಿದ್ದಾರೆ.