"ಅಸ್ಪೃಶ್ಯರೆಂಬ ಕಾರಣಕ್ಕಾಗಿ ಸಂಸತ್ ಭವನದ ಶಿಲಾನ್ಯಾಸಕ್ಕೆ ಆಗಿನ ರಾಷ್ಟ್ರಪತಿ ಕೋವಿಂದ್ ಗೆ ಆಹ್ವಾನವಿರಲಿಲ್ಲ"
ಮೋದಿ ಸರಕಾರದ ವಿರುದ್ಧ ಖರ್ಗೆ ವಾಗ್ದಾಳಿ
Photo: PTI
ಹೊಸದಿಲ್ಲಿ: ನೂತನ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ‘ಅಸ್ಪೃಶ್ಯ’ರೆಂಬ ಕಾರಣಕ್ಕಾಗಿ ಕೇಂದ್ರ ಸರಕಾರ ಆಹ್ವಾನಿಸಿರಲಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆಪಾದಿಸಿದ್ದಾರೆ.
‘‘ಒಂದು ವೇಳೆ ಅಸ್ಪೃಶ್ಯರು ಶಿಲಾನ್ಯಾಸ ಮಾಡಿದ್ದಲ್ಲಿ, ಅದನ್ನು ಗಂಗಾನದಿ ನೀರಿನಿಂದ ತೊಳೆಯಬೇಕಾಗಿ ಬರುತ್ತಿತ್ತು ’’ ಎಂದು ಖರ್ಗೆ ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಆಹ್ವಾನಿಸದೆ ಇರುವ ಮೋದಿ ಸರಕಾರದ ನಡೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು,ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಲನಚಿತ್ರ ತಾರೆಯರು ಸೇರಿದಂತೆ ಹಲವಾರು ಮಂದಿಯನ್ನು ಆಹ್ವಾನಿಸಲಾಗಿತ್ತಾದರೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ಇದು ರಾಷ್ಟ್ರಪತಿಗಳಿಗೆ ಮಾಡಿದ ಅಪಮಾನವಾಗಿದೆ ಎಂದವರು ಹೇಳಿದರು.
ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿಮುರ್ಮು ಬದಲಿಗೆ ತಾನೇ ಉದ್ಘಾಟಿಸುವ ಪ್ರಧಾನಿ ನರೇಂದ್ರ ಮೋದಿಯರ ನಿರ್ಧಾರವನ್ನು ಖಂಡಿಸಿ 20ಕ್ಕೂ ಅಧಿಕ ಪ್ರತಿಪಕ್ಷಗಳು ನೂತನ ಸಂಸತ್ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು. ಇದು ಘೋರ ಅಪಮಾನ ಮಾತ್ರವಲ್ಲ ನಮ್ಮ ಪ್ರಜಾಪ್ರಭುತ್ವದದ ಮೇಲೆ ನಡೆಸಿದ ಆಕ್ರಮಣವಾಗಿದೆ ಎಂದು ಅವು ಆಪಾದಿಸಿದ್ದವು.
ನೂತನ ಸಂಸತ್ ಕಟ್ಟಡಕ್ಕೆ 2020ರ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದರು. ಆಗ ರಾಮನಾಥ ಕೋವಿಂದ್ ರಾಷ್ಟ್ರಪತಿಯಾಗಿದ್ದರು.