ಮುಸ್ಲಿಮರಿಗೆ ʼಎಚ್ಚರಿಕೆʼ ನೀಡಿದ ಕೇಂದ್ರ ಸಚಿವ ಕಿರನ್ ರಿಜಿಜು
ರಾಹುಲ್ ಗಾಂಧಿಗೆ ದೇಶದ ಸಮಸ್ಯೆಗಳ ʼಎಬಿಸಿಡಿʼಯೇ ಗೊತ್ತಿಲ್ಲ ಎಂದ ಸಚಿವ

ಕಿರಣ್ ರಿಜಿಜು (Photo: PTI)
ಹೊಸದಿಲ್ಲಿ : ಕಾಂಗ್ರೆಸ್ ಪಕ್ಷವು ಹಿಂದೂಗಳನ್ನು ವಿಭಜಿಸಿ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ನೀಡಿದ ಸಂದರ್ಶನದಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಕಾಂಗ್ರೆಸ್ ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
"ಚುನಾವಣೆಗಳ ಸಮಯದಲ್ಲಿ, ಕಾಂಗ್ರೆಸ್ ತನ್ನ ಶೇಕಡಾ 15 ರಷ್ಟು ಮತಗಳನ್ನು ಮುಸ್ಲಿಂ ಸಮುದಾಯದಲ್ಲಿ ಮೀಸಲಾಗಿದೆ ಎಂದು ಹೇಳುತ್ತದೆ. ಇದು ಪಕ್ಷದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಕಾಂಗ್ರೆಸ್ ಮುಸ್ಲಿಮರನ್ನು ತನ್ನ ಮತಬ್ಯಾಂಕ್ ಎಂದು ಪರಿಗಣಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದು ಮುಸ್ಲಿಮರಿಗೆ ದೊಡ್ಡ ನಷ್ಟ" ಎಂದು ಕಿರಣ್ ರಿಜಿಜು ಉಲ್ಲೇಖಿಸಿದ್ದಾರೆ.
ರವಿವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ತಮ್ಮ ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡ ಕೇಂದ್ರ ಸಚಿವರು, “ಮುಸ್ಲಿಮರಿಗೆ ನನ್ನ ಎಚ್ಚರಿಕೆ: ಕಾಂಗ್ರೆಸ್ ನ ಮತ ಬ್ಯಾಂಕ್ ಆಗಬೇಡಿ! ಹಿಂದೂಗಳು ಮತ್ತು ಇತರರಿಗೂ ನನ್ನ ಎಚ್ಚರಿಕೆ: ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಗಳಿಗೆ ಬಲಿಯಾಗಬೇಡಿ”, ಎಂದು ಪೋಸ್ಟ್ ಮಾಡಿದ್ದಾರೆ.
ಮುಸ್ಲಿಮರು ಯಾವಾಗಲೂ ತನಗೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷವು ನಂಬುತ್ತದೆ. ಹೀಗಾದರೆ ಸಮುದಾಯವು ಹೇಗೆ ಅಭಿವೃದ್ಧಿ ಹೊಂದುತ್ತದೆ? ಎಂದು ಸಚಿವ ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ಕಾಂಗ್ರೆಸ್ ಪಕ್ಷವು ಭಾರತೀಯ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವುದನ್ನು ಮುಂದುವರೆಸಿತ್ತು ಎಂದು ಅವರು ಆರೋಪಿಸಿದ್ದಾರೆ.
ಹಿಂದೂಗಳನ್ನು ವಿಭಜಿಸುತ್ತಾ ಮುಸ್ಲಿಮರನ್ನು ತನ್ನ ಮತಬ್ಯಾಂಕ್ ಆಗಿ ಇಟ್ಟುಕೊಳ್ಳುವುದು ಕಾಂಗ್ರೆಸ್ ನ ಯೋಜನೆಯ ಮಹತ್ವದ ಭಾಗವಾಗಿದೆ ಎಂದು ರಿಜಿಜು ಹೇಳಿದ್ದಾರೆ.
“ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸೇರಿದ ಜನರು ಎದುರಿಸುತ್ತಿರುವ ಸಮಸ್ಯೆಗಳ ಎಬಿಸಿಡಿ ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲ. ಆದರೂ ಅವರು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಬಗ್ಗೆ ಸದಾ ಮಾತನಾಡುತ್ತಲೇ ಇದ್ದಾರೆ. ಅವರಿಗೆ ಹಾಗೆ ಮಾತನಾಡಲು ಕಲಿಸಲಾಗಿದೆ”, ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರೂ ಆಗಿರುವ ರಿಜಿಜು ಹೇಳಿದರು.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಬಡವರನ್ನಾಗಿ ಮಾಡಿದೆ ಎಂದು ಇತ್ತೀಚೆಗೆ ರಿಜಿಜು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.