ಕೋಲ್ಕತ್ತ| ಮಗಳ ಮೃತದೇಹವನ್ನು ಸಂರಕ್ಷಿಸಿಡಲು ಬಯಸಿದ್ದೆ, 300-400 ಪೊಲೀಸರು ಸುತ್ತುವರಿದು ಒತ್ತಡ ಸೃಷ್ಟಿಸಿದರು: ಮೃತ ವೈದ್ಯೆಯ ತಂದೆ
PC : hindustantimes.com
ಕೋಲ್ಕತ್ತ: ನನ್ನ ಮಗಳ ಮೃತದೇಹವನ್ನು ಸಂರಕ್ಷಿಸಿಡಲು ಬಯಸಿದ್ದೆ, ಆದರೆ ತಕ್ಷಣ ಶವಸಂಸ್ಕಾರ ಮಾಡುವಂತೆ ನನ್ನನ್ನು ಬಲವಂತಪಡಿಸಲಾಯಿತು ಎಂದು ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಒಳಗಾದ ವೈದ್ಯೆಯ ತಂದೆ ಹೇಳಿದ್ದಾರೆ.
ಬುಧವಾರ ರಾತ್ರಿ ಸರಕಾರಿ ಒಡೆತನದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೊರಗಡೆ ನಡೆದ ಧರಣಿಯಲ್ಲಿ ಸಂತ್ರಸ್ತೆ ವೈದ್ಯೆಯ ಕುಟುಂಬಸ್ಥರು ಮತ್ತು ಸಂಬಂಧಿಕರು ಪಾಲ್ಗೊಂಡರು.
ಪೊಲೀಸರು ನಮಗೆ ಹಣದ ಆಮಿಷವನ್ನೂ ಒಡ್ಡಿದರು ಎಂದು ವೈದ್ಯೆಯ ಹೆತ್ತವರು ಆರೋಪಿಸಿದರು.
ನಮ್ಮ ಮಗಳ ಮೃತದೇಹದೊಂದಿಗೆ ನಾವು ಮನೆಗೆ ಮರಳಿದಾಗ 300-400 ಪೊಲೀಸರು ನಮ್ಮನ್ನು ಸುತ್ತುವರಿದರು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ವೈದ್ಯೆಯ ತಂದೆ ಹೇಳಿದರು.
‘‘ನಾವು ನಮ್ಮ ಮಗಳ ಮೃತದೇಹವನ್ನು ಸಂರಕ್ಷಿಸಿಡಲು ಬಯಸಿದ್ದೆವು. ಆದರೆ ನಮ್ಮ ಮೇಲೆ ಅಗಾಧ ಒತ್ತಡವನ್ನು ಸೃಷ್ಟಿಸಲಾಯಿತು. ಸುಮಾರು 300-400 ಪೊಲೀಸರು ನಮ್ಮನ್ನು ಸುತ್ತುವರಿದರು. ನಾವು ಮನೆ ತಲುಪಿದಾಗ ಸುಮಾರು 300 ಪೊಲೀಸರು ನಮ್ಮ ಮನೆಯ ಹೊರಗಡೆ ನೆರೆದಿದ್ದರು. ಅವರು ಎಂಥ ಪರಿಸ್ಥಿತಿಯನ್ನು ಸೃಷ್ಟಿಸಿದರೆಂದರೆ, ನಮ್ಮ ಮಗಳ ಶವಸಂಸ್ಕಾರ ತುರ್ತಾಗಿ ಮಾಡಬೇಕಾದ ಬಲವಂತಕ್ಕೆ ನಾವು ಒಳಗಾದೆವು’’ ಎಂದು ಅವರು ಹೇಳಿದ್ದಾರೆ.
ಅಂತ್ಯಸಂಸ್ಕಾರವು ತರಾತುರಿಯಲ್ಲಿ ನಡೆಯಿತು ಮತ್ತು ಅದಕ್ಕೆ ಹಣ ಪಾವತಿಸುವಂತೆ ನಮಗೆ ಯಾರೂ ಹೇಳಲಿಲ್ಲ ಎಂದರು.
ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಕೆಲವು ಪೊಲೀಸರು ನಮಗೆ ಹೇಳಿದರು, ಆದರೆ ನಾನು ಅದನ್ನು ಹರಿದು ಹಾಕಿದೆ ಎಂಬುದಾಗಿಯೂ ಅವರು ನುಡಿದರು.