ಕೊಲ್ಕತ್ತಾ ಘಟನೆಯ ಕುರಿತು ಸುಪ್ರೀಂ ವಿಚಾರಣೆ: ವೈದ್ಯರ ಸುರಕ್ಷತೆಗೆ ಕ್ರಮಗಳನ್ನು ಸೂಚಿಸಲು ರಾಷ್ಟ್ರಮಟ್ಟದ ಕಾರ್ಯಪಡೆ ರಚನೆ
"ಅಪರಾಧ ಸ್ಥಳದ ರಕ್ಷಣೆಯನ್ನು ಮಾಡಲು ಏಕೆ ಸಾಧ್ಯವಾಗಿಲ್ಲ?": ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ತರಾಟೆ
ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ (Photo: PTI)
ಹೊಸದಿಲ್ಲಿ: ಕೊಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಘಟನೆಯ ಬಗ್ಗೆ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ ಹಾಗೂ ಕಾರ್ಯಸ್ಥಳಗಳಲ್ಲಿ ವೈದ್ಯರ ಸುರಕ್ಷತೆಗೆ ಕ್ರಮಗಳನ್ನು ಸೂಚಿಸಲು ಒಂಬತ್ತು ಮಂದಿ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ. ಈ ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಆಗಸ್ಟ್ 22ರೊಳಗೆ ಸಲ್ಲಿಸುವಂತೆ ತನಿಖೆ ನಡೆಸುತ್ತಿರುವ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ರಚಿಸಿರುವ ರಾಷ್ಟ್ರೀಯ ಕಾರ್ಯ ಪಡೆಯಲ್ಲಿ ಸರ್ಜನ್ ವೈಸ್ ಅಡ್ಮಿರಲ್ ಆರ್ ಸರಿನ್, ಡಾ ಡಿ ನಾಗೇಶ್ವರ್ ರೆಡ್ಡಿ, ಡಾ ಎಂ ಶ್ರೀನಿವಾಸ್, ಡಾ ಪ್ರತಿಮಾ ಮೂರ್ತಿ, ಡಾ ಗೋವರ್ಧನ್ ದತ್ತ್ ಪುರಿ, ಡಾ ಸೌಮಿತ್ರಾ ರಾವತ್, ಏಮ್ಸ್, ದಿಲ್ಲಿಯ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥೆ ಪ್ರೊ ಅನಿತಾ ಸಕ್ಸೇನಾ, ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನ ಡೀನ್ ಪ್ರೊ ಪಲ್ಲವಿ ಸಪ್ರೆ ಮತ್ತು ಏಮ್ಸ್ನ ನರರೋಗ ವಿಭಾಗದ ಡಾ ಪದ್ಮಾ ಶ್ರೀವಾಸ್ತವ ಇದ್ದಾರೆ.
ಆರ್ಜಿ ಕರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದವರನ್ನು ಬಂಧಿಸಿ ಅವರ ವಿರುದ್ಧ ಎಫ್ಐಆರ್ ಅನ್ನು ಪಶ್ಚಿಮ ಬಂಗಾಳ ಸರ್ಕಾರ ದಾಖಲಿಸಬೇಕು. ಈ ಘಟನೆಯ ತನಿಖೆಯ ಪ್ರಗತಿ ಕುರಿತು ವರದಿಯನ್ನು ಆಗಸ್ಟ್ 22ರೊಳಗೆ ಸರ್ಕಾರ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಪರಾಧ ಸ್ಥಳದ ರಕ್ಷಣೆಯನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಘಟನೆ ನಡೆದ ನಂತರ ಆಸ್ಪತ್ರೆಯ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ಏಕೆ ವಿಳಂಬಿಸಿದರು. ಅಲ್ಲಿಯವರೆಗೆ ಅವರೇನು ಮಾಡುತ್ತಿದ್ದರು?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.