ಕೊಲ್ಕತ್ತಾ | ವೈದ್ಯರ ನಿರ್ಲಕ್ಷ್ಯ ಆರೋಪ; ಆಸ್ಪತ್ರೆಯಲ್ಲಿ ದಾಂಧಲೆ, ನರ್ಸ್ ಗಳ ಮೇಲೆ ಹಲ್ಲೆ
ಕೊಲ್ಕತ್ತಾ: ಅವಳಿ ಹೃದಯಾಘಾತದಿಂದ 32 ವರ್ಷ ವಯಸ್ಸಿನ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತರ ಗುಂಪು ಶುಕ್ರವಾರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಮೂವರು ನರ್ಸ್ ಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇಲ್ಲಿನ ವಿದ್ಯಾಸಾಗರ ರಾಜ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಸುಮಾರು 100 ಮಂದಿಯ ಗುಂಪು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ, ಮೇಜು- ಕುರ್ಚಿಗಳನ್ನು ಮುರಿದು ಹಾಕಿದ್ದು, ಕಿಟಕಿ ಗಾಜುಗಳನ್ನು ಒಡೆದಿದೆ. ಶೆಲ್ಫ್ ಗಳಲ್ಲಿದ್ದ ಔಷಧಿ ಮತ್ತು ಇಂಜೆಕ್ಷನ್ ಗಳನ್ನು ನಾಶಪಡಿಸಿದೆ. ಘಟನೆಯಲ್ಲಿ ಒಬ್ಬಾಕೆ ನರ್ಸ್ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತರು ಮತ್ತು ಅವರ ತಂಡಕ್ಕೆ, ಗುಂಪನ್ನು ಚದುರಿಸಲು ಒಂದು ಗಂಟೆ ಕಾಲ ಬೇಕಾಯಿತು. ಮೃತ ಶೇಕ್ ಮೊಹ್ಮದ್ ಅಲಾಮ್ ಎಂಬವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಈ ದಾಂಧಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.
ಯುವಕ ಇಸಿಜಿ ವೇಳೆ ಮೃತಪಟ್ಟಿದ್ದಾನೆ ಎನ್ನುವುದು ಅಲಂ ಕುಟುಂಬದ ಆರೋಪ. ಆದ್ದರಿಂದ ಮರಣ ಪ್ರಮಾಣ ಪತ್ರದ ಬದಲು ವೈದ್ಯರಿಂದ ವಿವರಣೆ ಮತ್ತು ದಾಖಲೆಗಳನ್ನು ಆಗ್ರಹಿಸಿ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು. ವಾಗ್ವಾದ ಕ್ರಮೇಣ ಹಿಂಸಾರೂಪ ಪಡೆಯಿತು. ಪೊಲೀಸರ ಮಧ್ಯಪ್ರವೇಶದ ಬಳಿಕವಷ್ಟೇ ಮೃತದೇಹವನ್ನು ಒಯ್ಯಲು ಕುಟುಂಬ ಸದಸ್ಯರು ಒಪ್ಪಿದರು.
ಈ ಸಂಬಂಧ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಆರ್.ಜಿ.ಕರ್ ಆಸ್ಪತ್ರೆಯ ಭಯಾನಕ ಘಟನೆಯ ಬಳಿಕ ಆಸ್ಪತ್ರೆಗಳ ಸುರಕ್ಷೆ ಶೇಕಡ 90ರಷ್ಟು ಹೆಚ್ಚಿದೆ ಎಂಬ ಅಧಿಕೃತ ಪ್ರತಿಪಾದನೆಯನ್ನು ನರ್ಸ್ ಗಳು ಹಾಗೂ ವೈದ್ಯರು ಪ್ರಶ್ನಿಸಿದ್ದಾರೆ. ಈ ಹಿಂಸಾಚಾರ ನಡೆದಾಗ ಯಾವ ಭದ್ರತಾ ಸಿಬ್ಬಂದಿಯೂ ಕಾಣಿಸಿಕೊಂಡಿಲ್ಲ ಎನ್ನುವುದು ವೈದ್ಯರ ಆರೋಪ.