ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ | ಠಾಣೆಯಲ್ಲೇ ಸುಳ್ಳು ದಾಖಲೆ ಸೃಷ್ಟಿ: ಸಿಬಿಐ
PC: PTI
ಕೊಲ್ಕತ್ತಾ: ಇಲ್ಲಿನ ಆರ್.ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಕಿರಿಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣದ ದಾಖಲೆಗಳನ್ನು ನಾಶಪಡಿಸುವ ವಿಸ್ತೃತ ಪಿತೂರಿ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲಾ ಪೊಲೀಸ್ ಠಾಣೆಯಲ್ಲಿ ಕೆಲ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಎಸಿಜೆಎಂ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
ಠಾಣಾಧಿಕಾರಿ ಅಭಿಜಿತ್ ಮಂಡಲ್ ಅವರು ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಸಂದೀಪ್ ಘೋಷ್ ಅವರೊಂದಿಗೆ ಅಪರಾಧ ನಡೆದ ದಿನ ಅಂದರೆ ಆಗಸ್ಟ್ 9ರಂದು ಹಲವು ಬಾರಿ ಮಾತನಾಡಿದ್ದಾರೆ ಎಂದೂ ಸಿಬಿಐ ಹೇಳಿದೆ.
ಪೊಲೀಸ್ ಠಾಣೆಯಲ್ಲಿ ಕೆಲ ದಾಖಲೆಗಳನ್ನು ತಿರುಚಿರುವುದೂ ಸೇರಿದಂತೆ ಹೊಸ ಹಾಗೂ ಹೆಚ್ಚುವರಿ ಸತ್ಯಾಂಶಗಳು ಇಬ್ಬರ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಬಹಿರಂಗಪಡಿಸಿದೆ. ಕೋರ್ಟ್ ನಲ್ಲಿ ಇಂಥ ಹೇಳಿಕೆ ನೀಡುವ ಬದಲು ದಾಖಲೆಗಳನ್ನು ಸಲ್ಲಿಸುವಂತೆ ಈ ಸಂದರ್ಭದಲ್ಲಿ ಮಂಡಲ್ ಹಾಗೂ ಘೋಷ್ ಪರ ವಕೀಲರು ಸಿಬಿಐಗೆ ಸವಾಲು ಹಾಕಿದರು. ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥರು ಠಾಣಾಧಿಕಾರಿ ಜತೆ ಮಾತನಾಡಿರುವುದು ಸಹಜ ಎಂದು ಅವರು ಹೇಳಿದರು.
ಇಬ್ಬರೂ ಆರೋಪಿಗಳನ್ನು ಸೆಪ್ಟೆಂಬರ್ 30 ರ ವರೆಗೂ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದೆ. ತನಿಖೆ ಸ್ಥಿತಿಗತಿ ಬಗ್ಗೆ ಈಗಾಗಲೇ ಸಿಬಿಐ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದೆ. ದಾಖಲೆಗಳನ್ನು ನಾಶಪಡಿಸಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಈ ವರದಿಯಲ್ಲಿ ಸಿಬಿಐ ಹೇಳಿತ್ತು.