ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಧರಣಿ ಅಂತ್ಯಗೊಳಿಸಲು ನಿರಾಕರಿಸಿದ ಕಿರಿಯ ವೈದ್ಯರು
Photo: PTI
ಕೋಲ್ಕತ್ತಾ: ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನಾನಿರತ ಕಿರಿಯ ವೈದ್ಯರು ತಮ್ಮ ಧರಣಿಯನ್ನು ಅಂತ್ಯಗೊಳಿಸಲು ನಿರಾಕರಿಸಿದ್ದು, ಸಿಎಂ ಜೊತೆ 2ನೇ ಬಾರಿ ಮಾತುಕತೆಗೆ ಅವಕಾಶ ಕೋರಿದ್ದಾರೆ.
ಪ್ರತಿಭಟನಾ ನಿರತ ವೈದ್ಯರ ಬೇಡಿಕೆಯಂತೆ ಪಶ್ಚಿಮ ಬಂಗಾಳ ಸರ್ಕಾರ ಕೋಲ್ಕತ್ತಾ ಪೊಲೀಸ್ ಕಮಿಷನರ್ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾಯಿಸಿದ್ದರು. ಇದನ್ನು "ಭಾಗಶಃ ವಿಜಯ" ಎಂದು ಧರಣಿ ನಿರತ ಕಿರಿಯ ವೈದ್ಯರು ಹೇಳಿಕೊಂಡಿದ್ದು, ಕೋಲ್ಕತ್ತಾದ ಸ್ವಾಸ್ಥ್ಯ ಭವನದ ಬಳಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಮುಂದುವರಿಸಿಲು ನಿರ್ಧರಿಸಿದ್ದಾರೆ.
ಪ್ರತಿಭಟನಾ ನಿರತ ಕಿರಿಯ ವೈದ್ಯರು ತಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನಿಸಲು ನಡೆಸಿದ ಸಭೆಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಲು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ಈಮೇಲ್ ಕಳುಹಿಸಿ ಇತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಜೊತೆ ಮಾತುಕತೆಗೆ ಅವಕಾಶ ಕೋರಿದ್ದಾರೆ.
ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆ ಮತ್ತು ಭದ್ರತೆ, ಜೀವ ರಕ್ಷಕ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವುದು, ಸಿಬ್ಬಂದಿಗಳ ನೇಮಕಾತಿ, ಭ್ರಷ್ಟಾಚಾರ ಮತ್ತು ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಗೆ ಭರವಸೆ ನೀಡಿದ 100 ಕೋಟಿ ರೂ. ಹೇಗೆ ಖರ್ಚು ಮಾಡಲು ಉದ್ದೇಶಿಸಿದೆ ಎಂಬ ಬಗ್ಗೆ ಸಿಎಂ ಜೊತೆ ಚರ್ಚಿಸಲು ಬಯಸುವುದಾಗಿ ಕಿರಿಯ ವೈದ್ಯರು ಹೇಳಿದ್ದಾರೆ.