ಕುವೈತ್ ಅಗ್ನಿ ದುರಂತ | ಮೃತರ ಕುಟುಂಬಗಳಿಗೆ ತಲಾ 8 ಲಕ್ಷ ರೂ. ಮತ್ತು 4 ವರ್ಷಗಳ ವೇತನ ಪರಿಹಾರ ಭರವಸೆ
PC : PTI
ಕೊಚ್ಚಿ: ಕುವೈತ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ತಮ್ಮ ಸಂಸ್ಥೆಯ ಕಾರ್ಮಿಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ಎನ್ಬಿಟಿಸಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ಅಬ್ರಹಾಂ, ಈ ಘಟನೆಯು ದುರದೃಷ್ಟಕರವಾಗಿದ್ದು, ಮೃತ ಕುಟುಂಬಗಳ ಸದಸ್ಯರ ಆರೈಕೆಯ ಹೊಣೆಯನ್ನು ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಘಟನೆ ನಡೆದ ಮೂರು ದಿನಗಳ ನಂತರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾದ ಅಬ್ರಹಾಂ, "ಈ ಘಟನೆಯ ಬಗ್ಗೆ ತೀವ್ರವಾಗಿ ವಿಷಾದಿಸುತ್ತೇವೆ. ಘಟನೆಯ ಬಳಿಕ ನಾನು ಮನೆಯಲ್ಲಿ ಅಳುತ್ತಿದ್ದೆ. ನನಗೆ ಬಹುತೇಕರು ಪರಿಚಯವಿದ್ದರು. ಅವರೆಲ್ಲ ನಮ್ಮೊಂದಿಗೆ 27 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಉದ್ಯೋಗ ನಿರ್ವಹಿಸುತ್ತಿದ್ದರು. ಅಲ್ಲಿ ಏನಾಗಿದೆಯೋ ಅದು ನಿಜಕ್ಕೂ ದುರದೃಷ್ಟಕರ. ನಮ್ಮ ಕಂಪನಿಯ ನಿರ್ದೇಶಕರು ಹಾಗೂ ವ್ಯವಸ್ಥಾಪಕರು ಪ್ರತಿ ಮೃತ ಕುಟುಂಬದ ಸದಸ್ಯರನ್ನು ಭೇಟಿಯಾಗುತ್ತಿದ್ದಾರೆ. ಅವರಿಗೆ ತಮ್ಮ ಸಂತಾಪ ಸೂಚಿಸುತ್ತಿದ್ದಾರೆ” " ಎಂದು ಅವರು ಹೇಳಿದ್ದಾರೆ.
"ಈ ಘಟನೆಯಲ್ಲಿ ನಮ್ಮ ತಪ್ಪೇನೂ ಇಲ್ಲ. ಹೀಗಿದ್ದೂ ಘಟನೆಯ ಹೊಣೆಯನ್ನು ನಾವೇ ತೆಗೆದುಕೊಳ್ಳುತ್ತೇವೆ. ಅವರು ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅವರು ನಮ್ಮ ಕುಟುಂಬವಾಗಿದ್ದಾರೆ" ಎಂದು ಅವರು ಭಾವುಕರಾದರು.
"ಮೃತರ ಕುಟುಂಬಗಳಿಗೆ ನಾವು ಶೀಘ್ರವೇ 8 ಲಕ್ಷ ರೂ. ಪರಿಹಾರ ಮೊತ್ತವನ್ನು ವಿತರಿಸಲಿದ್ದೇವೆ. ಇದರೊಂದಿಗೆ ನಾಲ್ಕು ವರ್ಷಗಳ ವೇತನಕ್ಕೆ ಸಮನಾದ ವಿಮಾ ಪರಿಹಾರವನ್ನು ಪಡೆಯಲಿದ್ದಾರೆ. ನಾವು ಮೃತರ ಕುಟುಂಬಗಳ ಬಗ್ಗೆ ಕಾಳಜಿ ಹೊಂದಿದ್ದೇವೆ. ನಾವು ಅವರಿಗೆ ನೆರವು ಮತ್ತು ಉದ್ಯೋಗಗಳನ್ನು ಒದಗಿಸಲಿದ್ದೇವೆ" ಎಂದು ಅವರು ಭರವಸೆ ನೀಡಿದ್ದಾರೆ.
ಕಟ್ಟಡವು ಕಿಕ್ಕಿರಿದಿತ್ತು ಎಂಬ ಆರೋಪಗಳನ್ನು ಅವರು ಇದೇ ವೇಳೆ ಅಲ್ಲಗಳೆದಿದ್ದಾರೆ. ಭೋಗ್ಯಕ್ಕೆ ಪಡೆದ ಕಟ್ಟಡದಲ್ಲಿ ಮೂರು ಮಲಗುವ ಕೋಣೆಯೊಂದಿಗಿನ 24 ಅಪಾರ್ಟ್ಮೆಂಟ್ಗಳಿದ್ದವು. ಅಲ್ಲಿ ಸುಮಾರು 160 ಉದ್ಯೋಗಿಗಳಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ವರದಿಗಳ ಪ್ರಕಾರ, ಭದ್ರತಾ ಸಿಬ್ಬಂದಿಯ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದಾಗಿ ಈ ದುರಂತ ಸಂಭವಿಸಿದೆ. ಆ ಕೊಠಡಿಯು ನೆಲಮಾಳಿಗೆಯಲ್ಲಿದೆ. ಕೆಲವು ವರದಿಗಳು ಪ್ರತಿಪಾದಿಸಿರುವಂತೆ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿಲ್ಲ. ಕಟ್ಟಡದಲ್ಲಿ ಅಡುಗೆ ಮಾಡಲು ಅವಕಾಶವಿಲ್ಲ" ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕಟ್ಟಡವು ಹೆಚ್ಚೇನೂ ಹಳತಾಗಿರಲಿಲ್ಲ ಹಾಗೂ ನಮ್ಮ ಉದ್ಯೋಗಿಗಳಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ಒದಗಿಸಲಾಗಿತ್ತು ಎಂದು ಅಬ್ರಹಾಂ ಹೇಳಿದ್ದಾರೆ.
ಕುವೈತ್ನಲ್ಲಿರುವ ಈ ಕಟ್ಟಡದಲ್ಲಿ ಜೂನ್ 12ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದು, 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಡಣಂತಿಟ್ಟದಲ್ಲಿನ ನಿರಾನಮ್ ಗ್ರಾಮದ ಪ್ರತಿಷ್ಠಿತ ಉದ್ಯಮಿಯಾದ ಅಬ್ರಹಾಂ, ಎನ್ಬಿಟಿಸಿ ಸಮೂಹ ಸಂಸ್ಥೆಯ ಪಾಲುದಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಟ್ರವಾಂಕೋರ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಂತರ್ಜಾಲ ತಾಣದ ಪ್ರಕಾರ, ಎನ್ಬಿಟಿಸಿ ಸಮೂಹ ಸಂಸ್ಥೆಯು ಕುವೈತ್ನ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿದೆ.
ಅಬ್ರಹಾಂ ಅವರು ಕೊಚ್ಚಿಯ ಕ್ರೌನ್ ಪ್ಲಾಝಾದ ಅಧ್ಯಕ್ಷರಾಗಿದ್ದು, ಇದು ಪಂಚತಾರಾ ದರ್ಜೆಯ ಹೋಟೆಲ್ ಎಂದು ಹೇಳಲಾಗಿದೆ.
ಚಿತ್ರ ನಿರ್ಮಾಣಕ್ಕೂ ಇಳಿದಿದ್ದ ಅಬ್ರಹಾಂ, ಇತ್ತೀಚಿಗೆ "ಆಡುಜೀವಿತಂ" ಎಂಬ ನೈಜ ಕತೆಯನ್ನು ಆಧರಿಸಿದ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿನ ವಲಸೆ ಕಾರ್ಮಿಕರ ಬದುಕಿನ ಕುರಿತು ಚಿತ್ರಿಸಲಾಗಿತ್ತು. 1977ರಲ್ಲಿ ಸ್ಥಾಪನೆಯಾಗಿರುವ ಎನ್ಬಿಟಿಸಿ ಸಮೂಹ ಸಂಸ್ಥೆಯು, ಎಂಜಿನಿಯರಿಂಗ್, ನಿರ್ಮಾಣ ಕಾಮಗಾರಿ, ಫ್ಯಾಬ್ರಿಕೇಶನ್, ಯಾಂತ್ರಿಕ, ತಾಂತ್ರಿಕ ಸೇವೆಗಳು, ಭಾರಿ ಉಪಕರಣಗಳ ಗುತ್ತಿಗೆ, ಸರಕು ಸಾಗಣೆ, ಹೋಟೆಲ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದೆ.