ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅಡ್ವಾಣಿ ಭಾಗವಹಿಸುತ್ತಾರೆ: ವಿಶ್ವ ಹಿಂದೂ ಪರಿಷತ್
Photo : PTI
ಹೊಸದಿಲ್ಲಿ: ಬಿಜೆಪಿ ಹಿರಿಯ ಮುಖಂಡ ಲಾಲ್ಕೃಷ್ಣ ಅಡ್ವಾಣಿಯವರು ಈ ತಿಂಗಳ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ಆರೆಸ್ಸೆಸ್ ಮುಖಂಡ ಕೃಷ್ಣ ಗೋಪಾಲ ಮತ್ತು ರಾಮ ಲಾಲ್ ಅವರ ಜತೆ ಅಡ್ವಾಣಿಯವರ ನಿವಾಸಕ್ಕೆ ಬುಧವಾರ ಭೇಟಿ ನೀಡಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ ಬಳಿಕ ಅಲೋಕ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಗೆ ಆಗಮಿಸಲಿರುವ ಅಡ್ವಾಣಿಯವರಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜನವರಿ 22ರಂದು ಭವ್ಯ ಮಂದಿರದಲ್ಲಿ ರಾಮನ ವಿಗ್ರಹದ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ಸಂಪ್ರದಾಯಗಳ ಸಂತರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಆಹ್ವಾನವನ್ನು ತಳ್ಳಿಹಾಕಿದೆ.
ದೇವಸ್ಥಾನದ ಅಧಿಕಾರಿಗಳ ಪ್ರಕಾರ, ಏಳು ದಿನಗಳ ಕಾರ್ಯಕ್ರಮ ಜನವರಿ 16ರಿಂದ ಆರಂಭವಾಗಲಿದೆ. ಸಮಾಜದ ಎಲ್ಲ ವರ್ಗಗಳ ಮುಖಂಡರು ಭಾಗವಹಿಸುವ ಜನವರಿ 22ರ ಕಾರ್ಯಕ್ರಮಕ್ಕೆ ಸಮರೋಪಾದಿ ಸಿದ್ಧತೆಗಳು ನಡೆಯುತ್ತಿವೆ.
ವಾರಾಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ಅವರು ಜನವರಿ 22ರಂದು ರಾಮ ಲಲ್ಲಾ ಪ್ರಾಣಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸುವರು. ಜನವರಿ 14ರಿಂದ ಜನವರಿ 22ರವರೆಗೆ ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ ಆಯೋಜಿಸಲಾಗಿದೆ.