ಲಡಾಖ್ನಲ್ಲಿ ಉದ್ದೇಶಿತ ಬೃಹತ್ ಇಂಧನ ಯೋಜನೆಯ ಸುತ್ತ ನಿಗೂಢತೆ | ಸ್ಥಳೀಯರಲ್ಲಿ ಹೆಚ್ಚಿದ ಜೀವನೋಪಾಯದ ಆತಂಕ
Photo : scroll.in
ಲೇಹ್ : ಪರಿಸರಸೂಕ್ಷ್ಮ ಲಡಾಖ್ನಲ್ಲಿ ಅದರ ಪರಿಸರ ಮತ್ತು ಜನರನ್ನು ಅಪಾಯಕ್ಕೆ ಒಡ್ಡುವ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರವು ಮುಂದಾಗಿರುವುದು ಲಡಾಖ್ ನ ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಪಾಂಗ್ ಪ್ರದೇಶದಲ್ಲಿ ತಲೆಯೆತ್ತಲಿರುವ ಬೃಹತ್ ನವೀಕರಿಸಬಹುದಾದ ಇಂಧನ ಯೋಜನೆಯ ಸುತ್ತಲಿನ ಅಪಾರದರ್ಶಕತೆ ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆಗಳ ಕೊರತೆ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ,ಜೊತೆಗೆ ಈ ಸೂಕ್ಷ್ಮ ಗಡಿ ಪ್ರದೇಶದಲ್ಲಿ ಪ್ರತಿಭಟನಾ ಆಂದೋಲನಗಳಿಗೆ ಕಾರಣವಾಗಿದೆ.
ಮೇ ತಿಂಗಳ ಆರಂಭವು ಲಡಾಖ್ನ ಚಾಂಗ್ಥಾಂಗ್ ಪ್ರದೇಶದಲ್ಲಿ ಬಿಡುವಿಲ್ಲದ ಸಮಯವಾಗಿದೆ. ಆಗ ಪಶುಪಾಲಕರು ಬೇಸಿಗೆಗಾಗಿ ತಮ್ಮ ಜಾನುವಾರುಗಳೊಂದಿಗೆ ಪಾಂಗ್ ಪ್ರದೇಶದಲ್ಲಿಯ ಎತ್ತರದ ಹಸಿರು ಹುಲ್ಲುಗಾವಲುಗಳಿಗೆ ವಲಸೆ ತೆರಳಲು ತಯಾರಿಗಳನ್ನು ನಡೆಸುತ್ತಾರೆ. ಅಕ್ಟೋಬರ್ನಲ್ಲಿ ಚಳಿಗಾಲ ಆರಂಭವಾಗುವವರೆಗೂ ಅವರು ಹುಲ್ಲುಗಾವಲುಗಳು ಲಭ್ಯವಿರುವ ಪ್ರದೇಶಗಳಿಗೆ ಅಲೆದಾಡುತ್ತ ತಮ್ಮ ಕುರಿಗಳು ಮತ್ತು ಮೇಕೆಗಳನ್ನು ಮೇಯಿಸುತ್ತಿರುತ್ತಾರೆ.
ಆದರೆ ಕಳೆದ ವರ್ಷದಿಂದ ಸ್ಥಳೀಯವಾಗಿ ಚಾಂಗ್ಪಾಗಳು ಎಂದು ಕರೆಯಲ್ಪಡುವ ಈ ಪಶುಪಾಲಕರು ಆತಂಕದಲ್ಲಿದ್ದಾರೆ. ಪಾಂಗ್ನಲ್ಲಿ ತಲೆಯೆತ್ತಲಿರುವ ವಿಸ್ತಾರವಾದ 13 ಗಿಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಯೋಜನೆಯು ತಮ್ಮ ವಲಸೆ ಮಾರ್ಗಗಳಿಗೆ ಅಡ್ಡಿಯನ್ನುಂಟು ಮಾಡಬಹುದು ಮತ್ತು ತಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಹಸಿರು ಹುಲ್ಲುಗಾವಲು ಪ್ರದೇಶಗಳ ಸುತ್ತ ಬೇಲಿ ನಿರ್ಮಾಣಕ್ಕೆ ಕಾರಣವಾಗಬಹುದು ಎಂಬ ಭೀತಿ ಅವರಲ್ಲಿ ಮನೆ ಮಾಡಿದೆ. ‘ನಾವು ಬೇಸಿಗೆಯ ಆರು ತಿಂಗಳುಗಳನ್ನು ಪಾಂಗ್ ಪ್ರದೇಶದಲ್ಲಿ ಕಳೆಯುತ್ತೇವೆ. ಅವರು ನಮ್ಮ ಇಡೀ ಹುಲ್ಲುಗಾವಲನ್ನು ಸ್ವಾಧೀನ ಪಡಿಸಿಕೊಂಡರೆ ನಮ್ಮ ಜಾನುವಾರುಗಳಿಗೆ ತಿನ್ನಲು ಏನೂ ಇರುವುದಿಲ್ಲ ಮತ್ತು ನಾಶವಾಗುತ್ತವೆ. ಪರಿಣಾಮವಾಗಿ ಚಾಂಗ್ಪಾಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಾರೆ ’ ಎಂದು scroll.in ನೊಂದಿಗೆ ಮಾತನಾಡಿದ ಸಮಾದ್ ರಾಕ್ಚಾನ್ ಗ್ರಾಮದ ಸರಪಂಚ್ ಲುಂಡುಪ್ ಗಿಯಾಸ್ಟೊ ಹೇಳಿದರು.
ಪ್ರಸ್ತಾವಿತ ಯೋಜನೆಯು 9 ಗಿಗಾವ್ಯಾಟ್ ಸೌರ ವಿದ್ಯುತ್ ಮತ್ತು 4 ಗಿಗಾವ್ಯಾಟ್ ಪವನ ವಿದ್ಯುತ್ತನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಉತ್ಪಾದಿತ ವಿದ್ಯುತ್ತನ್ನು ಲಡಾಖ್ನಿಂದ 713 ಕಿ.ಮೀ.ದೂರದ ಹರ್ಯಾಣಕ್ಕೆ ರವಾನಿಸಲಾಗುತ್ತದೆ ಮತ್ತು ಅಲ್ಲಿ ಅದನ್ನು ರಾಷ್ಟ್ರೀಯ ಗ್ರಿಡ್ನೊಂದಿಗೆ ಸಂಯೋಜಿಸಲಾಗುತ್ತದೆ. ಪ್ರಸರಣ ಮಾರ್ಗಗಳ ನಿರ್ಮಾಣದ ಹೊಣೆಗಾರಿಕೆಯನ್ನು ಸರಕಾರಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಆದರೆ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಸರಕಾರವೇ ಸ್ಥಾಪಿಸುತ್ತದೆಯೇ ಅಥವಾ ಖಾಸಗಿ ಸಂಸ್ಥೆಗೆ ನೀಡಲಾಗುತ್ತದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಹವಾಮಾನ ವೈಪರೀತ್ಯವು ಹುಲ್ಲುಗಾವಲು ಪ್ರದೇಶವನ್ನು ಕುಗ್ಗಿಸಿದ್ದು,ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಉದ್ವಿಗ್ನತೆ ವಿಶಾಲವಾದ ಪ್ರದೇಶಕ್ಕೆ ಪ್ರವೇಶವನ್ನು ಕಡಿತಗೊಳಿಸಿದೆ. ಹೀಗಾಗಿ ಚಾಂಗ್ಥಾಂಗ್ನ ಹುಲ್ಲುಗಾವಲುಗಳು ಅಪಾರ ಒತ್ತಡದಡಿ ಇರುವಾಗ ನವೀಕರಿಸಬಹುದಾದ ಇಂಧನ ಯೋಜನೆಯು ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು 2020, ಆ.15ರಂದು ತನ್ನ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಲಡಾಖ್ ಪ್ರದೇಶದಲ್ಲಿ 7.5 ಗಿಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪನೆ ಕುರಿತು ಮಾತನಾಡಿದಾಗ ಲಡಾಖ್ ಜನತೆ ಮೊದಲ ಬಾರಿಗೆ ಯೋಜನೆಯ ಬಗ್ಗೆ ಕೇಳಿದ್ದರು.
ನವಂಬರ್ 2021ರ ವೇಳೆಗೆ ಪ್ರಸ್ತಾವಿತ ಯೋಜನೆಯು 10 ಗಿಗಾವ್ಯಾಟ್ಗೆ ವಿಸ್ತರಿಸಿತ್ತು ಮತ್ತು ಯೋಜನೆಗೆ 160 ಚ.ಕಿ.ಮೀ.ಭೂಮಿಯನ್ನು ಅಗತ್ಯವಾಗಿಸಿತ್ತು.
ಇದೀಗ ಯೋಜನೆಯನ್ನು ಸೌರ,ಪವನ ಮತ್ತು ಬ್ಯಾಟರಿ ಇಂಧನ ಸಂಗ್ರಹಣೆ ವ್ಯವಸ್ಥೆಗಳನ್ನು ಒಳಗೊಂಡಿರುವ ‘ಹೈಬ್ರಿಡ್ ನವೀಕರಿಸಬಹುದಾದ ಇಂಧನ ಪಾರ್ಕ್’ ಎಂದು ಬಿಂಬಿಸಲಾಗಿದೆ. ಪಾಂಗ್ ಜೊತೆಗೆ ಡೆಬ್ರಿಕ್ ಮತ್ತು ಖರ್ನಾಕ್ಗಳಲ್ಲಿಯೂ ಹುಲ್ಲುಗಾವಲನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಯೋಜನೆಗೆ ಒಟ್ಟು 250 ಚ.ಕಿ.ಮೀ.ಭೂಮಿಯ ಅಗತ್ಯವನ್ನು ಅಂದಾಜಿಸಲಾಗಿದ್ದು, ಇದು ಕೇಂದ್ರಾಡಳಿತ ಪ್ರದೇಶ ಚಂಡಿಗಡದ ವಿಸ್ತೀರ್ಣದ ಎರಡು ಪಟ್ಟುಗಳಷ್ಟು ಆಗಿದೆ.
ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 13 ಗಿಗಾವ್ಯಾಟ್ ಸಾಮರ್ಥ್ಯದ ಯೋಜನೆಗಾಗಿ ಮಣ್ಣು ಪರೀಕ್ಷೆ ಮತ್ತು ಡಿಪಿಆರ್ ತಯಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಸೌಜನ್ಯ : scroll.in