ಭೂ ಕಬಳಿಕೆ ಆರೋಪ: ಕೆಸಿಆರ್ ಅಳಿಯ ಸಹಿತ ಎಂಟು ಮಂದಿಯ ಬಂಧನ
ಕನ್ನಾ ರಾವ್ Photo: twitter.com/Deccan24x7
ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಅಳಿಯ ಹಾಗೂ ಉದ್ಯಮಿ ಕನ್ನಾ ರಾವ್ (46) ಸೇರಿದಂತೆ ಎಂಟು ಮಂದಿಯನ್ನು ಭೂ ಕಬಳಿಕೆ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
10 ಸಾವಿರ ಚದರ ಯಾರ್ಡ್ ನಿವೇಶನವನ್ನು ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಶೆಡ್ ಧ್ವಂಸಗೊಳಿಸಿ, ಅದರ ಉಸ್ತುವಾರಿ ಹೊಂದಿದ್ದ ವ್ಯಕ್ತಿಯನ್ನು ಥಳಿಸಿದ ಆರೋಪದಲ್ಲಿ ಮಾರ್ಚ್ 3ರಂದು ಕನ್ನಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಓಎಸ್ಆರ್ ಪ್ರಾಜೆಕ್ಟ್ಸ್ ಎಂಬ ಖಾಸಗಿ ಕಂಪನಿ ಹಾಗೂ ಆರೋಪಿಗಳ ನಡುವೆ ಈ ವಿವಾದಿತ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯ, ನ್ಯಾಯಾಲಯದಲ್ಲಿ ಬಾಕಿ ಇದೆ.
ಮಾರ್ಚ್ 3ರಂದು ಕನ್ನಾ ಹಾಗೂ ಇತರರ ವಿರುದ್ಧ ಅಕ್ರಮ ಪ್ರವೇಶ, ಅಪರಾಧ ಪಿತೂರಿ, ಕೊಲೆ ಯತ್ನ ಮತ್ತು ದೊಂಬಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಕನ್ನಾ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಮಂಗಳವಾರ ಮತ್ತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದರು. ಇದನ್ನು ಕೂಡಾ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಈ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ 14 ಮಂದಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.