ಸಾವಿನ ಅಂಚಿನಲ್ಲಿರುವ ವ್ಯಕ್ತಿಯ ಕೊನೆಯ ಮಾತುಗಳಿಗೆ ಅಪಾರವಾದ ಮಾನ್ಯತೆಯಿದೆ : ಸುಪ್ರೀಂಕೋರ್ಟ್
“ಸಾಯುವ ವ್ಯಕ್ತಿ ಸುಳ್ಳು ಹೇಳುವುದು ತೀರಾ ಅಪರೂಪ”
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ : ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳು ಸುಳ್ಳು ಹೇಳುವುದು ತೀರಾ ಅಪರೂಪ ಹಾಗೂ ಅವರ ಕೊನೆಯ ಮಾತುಗಳಿಗೆ ಕಾನೂನಿನ ದೃಷ್ಟಿಯಲ್ಲಿ ಅಪಾರವಾದ ಮಾನ್ಯತೆಯಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ತನ್ನ ಪತ್ನಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಅನುಭವಿಸಲು ಜೈಲಿಗೆ ಮರಳುವಂತೆ ವ್ಯಕ್ತಿಯೊಬ್ಬನಿಗೆ ಆದೇಶ ನೀಡಿದ ಸಂದರ್ಭ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಹಾಗೂ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಆಕೆಯ ಪತಿ ಹಾಗೂ ಆತನ ಸಹೋದರ 2002ರಲ್ಲಿ ಅಂಜೊಗಾಯ್ ಎಂಬಲ್ಲಿ ಕೊಲೆ ಮಾಡಿದ್ದರು. ಮಹಿಳೆಯು ತನ್ನ ವೇತನವನ್ನು ಪತಿಯ ಮನೆಯವರೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಆಕೆಯನ್ನು ಕಟ್ಟಿಹಾಕಿ, ಬೆಂಕಿ ಹಚ್ಚಿ ಸಾಯಿಸಿದ್ದರು. ಮೃತ ಮಹಿಳೆಯ ಪತಿಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು.
ತೀವ್ರವಾದ ಸುಟ್ಟ ಗಾಯಗಳಾದ ಮಹಿಳೆಯು ಸಾಯುವ ಸಂದರ್ಭ ನೀಡಿದ ಅಂತಿಮ ಹೇಳಿಕೆಯನ್ನು ಸುಪ್ರೀಂಕೋರ್ಟ್ ಪ್ರಕರಣದ ಕುರಿತು ತಾನು ನೀಡಿದ್ದ ತೀರ್ಪಿಗೆ ಪ್ರಮುಖ ಆಧಾರವಾಗಿ ಪರಿಗಣಿಸಿತ್ತು.
‘‘ವ್ಯಕ್ಚಿಯು ಸಾಯುವ ಸಂದರ್ಭ ನೀಡುವ ಹೇಳಿಕೆಯು ಮಹತ್ವದ್ದಾದುದು. ಯಾಕೆಂದರೆ ಆ ಘೋಷಣೆಯನ್ನು ಅತ್ಯಂತ ತೀವ್ರತೆಯೊಂದಿಗೆ ನೀಡಲಾಗುತ್ತದೆ. ವ್ಯಕ್ತಿಯು ಸಾವಿನ ಅಂಚಿನಲ್ಲಿರುವಾಗ ಆತ/ಆಕೆ ಸುಳ್ಳು ಹೇಳುವುದಕ್ಕೆ ಏನಾದರೂ ಉದ್ದೇಶವಿರುವುದು ತೀರಾ ಅಪರೂಪ” ಎಂದು ನ್ಯಾಯಮೂರ್ತಿ ಭೂಯಾನ್ ಆದೇಶದಲ್ಲಿ ತಿಳಿಸಿದ್ದಾರೆ.
ಸಾಯುವ ಸಮಯದಲ್ಲಿ ನೀಡಿದ ಹೇಳಿಕೆಯನ್ನು ಪುರಾವೆಯ ತುಣುಕಾಗಿ ಪರಿಗಣಿಸಬಹುದೆಂದು ನ್ಯಾಯಾಲಯ ತಿಳಿಸಿದೆ. ಸಾವಿನ ಸಮಯದಲ್ಲಿ ವ್ಯಕ್ತಿಯು ನೀಡುವ ಹೇಳಿಕೆಯು ದೃಢೀಕರಿಸಲ್ಪಡದೆ ಇದ್ದಲ್ಲಿ ಅದನ್ನು ಪುರಾವೆಯಾಗಿ ಪರಿಗಣಿಸಲಾಗದು ಎಂಬುದಕ್ಕೆ ಯಾವುದೇ ಕಾನೂನಿನಲ್ಲಿಲ್ಲವೆಂದು ಅವರು ಹೇಳಿದ್ದಾರೆ.
ಆದಾಗ್ಯೂ ನ್ಯಾಯಾಲಯವು ವ್ಯಕ್ತಿಯ ಅಂತಿಮ ಹೇಳಿಕೆಯನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಬೇಕೆಂದು ನ್ಯಾಯಪೀಠ ಅಭಿಪ್ರಾಯಿಸಿತು.