ಭಾರತೀಯ ಪ್ರಜೆಗಳೊಂದಿಗೆ ಎನ್ನಾರೈ, ಒಸಿಐಗಳ ವಿವಾಹ: ಕಾನೂನು ತರಲು ಕಾನೂನು ಆಯೋಗದ ಶಿಫಾರಸು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಅನಿವಾಸಿ ಭಾರತೀಯರು ಮತ್ತು ಭಾರತೀಯ ಪ್ರಜೆಗಳ ನಡುವೆ ಮೋಸದ ಮದುವೆಗಳ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿರುವ ಕಾನೂನು ಆಯೋಗವು, ಪರಿಸ್ಥಿತಿಯನ್ನು ಎದುರಿಸಲು ಸಮಗ್ರ ಕಾನೂನೊಂದನ್ನು ತರಬೇಕು ಮತ್ತು ಇಂತಹ ಮದುವೆಗಳ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ.
ಕಾನೂನು ಆಯೋಗದ ಅಧ್ಯಕ್ಷ ನ್ಯಾ(ನಿ).ರಿತುರಾಜ ಅವಸ್ಥಿ ಅವರು ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ ವೈವಾಹಿಕ ವಿಷಯಗಳ ಕುರಿತು ಕಾನೂನು ’ಶೀರ್ಷಿಕೆಯ ವರದಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಭಾರತೀಯ ಪ್ರಜೆಗಳೊಂದಿಗೆ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವಿದೇಶಿ ಪ್ರಜೆಗಳು ಮದುವೆಗಳ ಎಲ್ಲ ಆಯಾಮಗಳನ್ನು ಒಳಗೊಳ್ಳುವ ಸಮಗ್ರ ಕಾನೂನು ಅಗತ್ಯವಾಗಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿದೆ ಎಂದು ಅವಸ್ಥಿ ಹೇಳಿದ್ದಾರೆ.
ಎನ್ಆರ್ಐಗಳು ಮತ್ತು ಭಾರತೀಯ ಪ್ರಜೆಗಳ ನಡುವೆ ಮೋಸದ ಮದುವೆಗಳು ಹೆಚ್ಚುತ್ತಿರುವುದು ಕಳವಳಕಾರಿ ಪ್ರವೃತ್ತಿಯಾಗಿದೆ. ಇಂತಹ ಮೋಸದ ಮದುವೆಗಳು ಭಾರತೀಯ ಸಂಗಾತಿಯನ್ನು, ವಿಶೇಷವಾಗಿ ಮಹಿಳೆಯನ್ನು ಅನಿಶ್ಚಿತ ಸ್ಥಿತಿಗೆ ತಳ್ಳಿರುವುದನ್ನು ಹಲವರು ವರದಿಗಳು ಎತ್ತಿ ತೋರಿಸಿವೆ ಎಂದು ನ್ಯಾ.ಅವಸ್ಥಿ ಅವರು ಗುರುವಾರ ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರಿಗೆ ವರದಿಯೊಂದಿಗೆ ಸಲ್ಲಿಸಿರುವ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತಾವಿತ ಕಾನೂನು ಎನ್ನಾರೈಗಳಿಗೆ ಮಾತ್ರವಲ್ಲ, 1955ರ ಪೌರತ್ವ ಕಾಯ್ದೆಯಲ್ಲಿ ನೀಡಲಾಗಿರುವ ‘ಸಾಗರೋತ್ತರ ಭಾರತೀಯ ಪ್ರಜೆಗಳು’ ವ್ಯಾಖ್ಯಾನದಡಿ ಬರುವ ಎಲ್ಲ ವ್ಯಕ್ತಿಗಳಿಗೂ ಅನ್ವಯಗೊಳ್ಳಬೇಕು ಎಂದು ಹೇಳಿರುವ ಆಯೋಗವು,ಎನ್ನಾರೈಗಳು/ಒಸಿಐಗಳು ಮತ್ತು ಭಾರತೀಯ ಪ್ರಜೆಗಳ ನಡುವಿನ ಎಲ್ಲ ಮದುವೆಗಳನ್ನು ಭಾರತದಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ.
ಸಮಗ್ರ ಕೇಂದ್ರೀಯ ಕಾನೂನು ವಿಚ್ಛೇದನ, ಸಂಗಾತಿಗೆ ಜೀವನಾಂಶ, ಮಕ್ಕಳ ಪಾಲನೆಯ ಹೊಣೆ, ಎನ್ನಾರೈಗಳು ಮತ್ತು ಒಸಿಐಗಳಿಗೆ ಸಮನ್ಗಳು, ವಾರಂಟ್ಗಳು ಅಥವಾ ನ್ಯಾಯಾಂಗ ದಾಖಲೆಗಳ ಜಾರಿಗೊಳಿಸುವಿಕೆ ಕುರಿತು ನಿಬಂಧನೆಗಳನ್ನೂ ಒಳಗೊಂಡಿರಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ಇಂತಹ ಮದುವೆಗಳಿಗೆ ಸಂಬಂಧಿಸಿದಂತೆ 1967ರ ಪಾಸ್ಪೋರ್ಟ್ ಕಾಯ್ದೆಯಲ್ಲಿ ತಿದ್ದುಪಡಿಗಳನ್ನೂ ತರಬೇಕು ಎಂದು ಅದು ತಿಳಿಸಿದೆ.